ದಾವಣಗೆರೆ : ತರಕಾರಿ, ಸೊಪ್ಪು ದುಬಾರಿಯಾಗಿದ್ದು, ಇದರಿಂದ ಸಾಕಷ್ಟು ಜನ ತೊಂದರೆ ಅನುಭವಿಸುವಂತಾಗಿದೆ. ಅಂಗನವಾಡಿ ಕೇಂದ್ರದ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಸಲುವಾಗಿ ತರಕಾರಿ ಮತ್ತು ಸೊಪ್ಪನ್ನು ಹೆಚ್ಚು ನೀಡಲಾಗುತ್ತದೆ. ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಸರ್ಕಾರ ನೀಡುವ ಅಲ್ಪ ಮೊತ್ತದಲ್ಲಿ ತರಕಾರಿ ಖರೀದಿ ಮಾಡಲು ಸಾಧ್ಯವಾಗದ ಹಿನ್ನೆಲೆ ಅಂಗನವಾಡಿ ಕೇಂದ್ರದಲ್ಲಿ ಬೇಳೆಯೊಂದಿಗೆ ಇತರ ಪೂರಕ ಸಾಂಬಾರು ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವಂತಾಗಿದೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕಾಂಶ ಕೊರೆತೆ ಆಗುವ ಆತಂಕ ಎದುರಾಗಿದೆ.
ತರಕಾರಿ ಬೆಲೆ ಏರಿಕೆಯಿಂದ ದಾವಣಗೆರೆಯಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಕೂಡ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಗೂ ಪೌಷ್ಟಿಕತೆಯನ್ನು ಹೆಚ್ಚಿಸಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೋಷಣ್ ಅಭಿಯಾನ ಯೋಜನೆ ಜಾರಿಗೆ ತಂದಿದೆ. ಶಿಶು ಮತ್ತು ತಾಯಿಯ ಮರಣ ಪ್ರಮಾಣವನ್ನು ತಗ್ಗಿಸಲು ಈ ಯೋಜನೆ ಆರಂಭಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅ ಊಟದಲ್ಲಿ ಒಳ್ಳೆಯ ಸೊಪ್ಪು, ತರಕಾರಿ ಬೇಯಿಸಿ ಅಡುಗೆ ಉಣ ಬಡಿಸಲಾಗುತ್ತಿತ್ತು.
ಅದ್ರೆ, ಇದೀಗ ತರಕಾರಿ ಮತ್ತು ಸೊಪ್ಪಿನ ಬೆಲೆ ಗಗನಕ್ಕೇರಿದ ಪರಿಣಾಮ ಮಧ್ಯಾಹ್ನದ ಊಟದಲ್ಲಿ ತರಕಾರಿ ಕಡಿತಗೊಳಿಸಿ ಕೇವಲ ಬೇಳೆ, ಮೆಣಸಿನಕಾಯಿ ಪುಡಿ ಹಾಗೂ ಇತರ ಪೂರಕ ಪದಾರ್ಥಗಳು ಹಾಕಿ ಸಾಂಬಾರು ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಂಗನವಾಡಿ ಫೆಡರೇಶನ್ನ ಜಿಲ್ಲಾಧ್ಯಕ್ಷೆ ಶಾರದಮ್ಮ ಹೇಳಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸರ್ಕಾರ ಅನುದಾನ ಹೆಚ್ಚಿಸಬೇಕು. ಹಾಗೆಯೇ ಬಾಕಿ ಇರುವ ಅನುದಾನದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕಿದೆ. ಬೆಲೆ ಏರಿಕೆಯ ಈ ಸಂದರ್ಭದಲ್ಲಿ ನಮ್ಮ ಕುಟುಂಬ ನಿರ್ವಹಿಸುವುದು ಕಷ್ಟಕರವಾಗಿರುವಾಗ ನಾವೇ ಕೈಯಿಂದ ಹಣ ಹಾಕಿ ತರಕಾರಿ ತರುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತತೆಯರಿಗೆ ದಿಕ್ಕು ತೋಚದಂತಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಅಂಗನವಾಡಿ ಫೆಡರೇಶನ್ನ ಜಿಲ್ಲಾಧ್ಯಕ್ಷೆ ಶಾರದಮ್ಮ, "ಸೊಪ್ಪು ಮತ್ತು ತರಕಾರಿ ಖರೀದಿ ಮಾಡಲು ಒಂದು ಮಗುವಿಗೆ ಒಂದು ರೂಪಾಯಿ, ಗರ್ಭಿಣಿಯರಿಗೆ ಎರಡು ರೂಪಾಯಿಯಂತೆ ಸರ್ಕಾರ ಅನುದಾನ ನಿಗದಿ ಮಾಡಿದೆ. ಆದರೆ, ಈಗ ಬೆಲೆ ಏರಿಕೆಯಾಗಿದ್ದು, ಸರ್ಕಾರ ಹೆಚ್ಚು ಅನುದಾನ ನೀಡದೇ ಇರುವುದರಿಂದ ಸಮಸ್ಯೆ ಉಂಟಾಗಿದೆ. ಇದರಿಂದ ಕಾರ್ಯಕರ್ತೆಯರೇ ಈ ಪರಿಸ್ಥಿತಿಯನ್ನು ನಿರ್ವಹಿಸುವುದು ಅಸಾಧ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : Tomato rate: ಗಗನಕ್ಕೇರಿದ ತರಕಾರಿ ಬೆಲೆ, 120ರ ಗಡಿ ದಾಟಿದ ಟೊಮೆಟೋ.. ಹುಬ್ಬಳ್ಳಿ ಮಂದಿ ಕಂಗಾಲು
ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ, "ತರಕಾರಿ ಬೆಲೆ ಏರಿಕೆಯಿಂದಾಗಿ ಅಕ್ಷಯಪಾತ್ರೆ ಇಡಲಾಗಿದೆ. ಸಾರ್ವಜನಿಕರು ತರಕಾರಿ, ಸೊಪ್ಪು ನೀಡ್ತಿದ್ದಾರೆ. ಅದನ್ನು ಬಳಕೆ ಮಾಡಲಾಗುತ್ತದೆ. ಸರ್ಕಾರ ತರಕಾರಿ ಖರೀದಿಗೆ ಒಂದು ಮಗುವಿಗೆ 01 ರೂಪಾಯಿ, ಗರ್ಭಿಣಿಯರಿಗೆ 02 ರೂಪಾಯಿ ನೀಡುತ್ತಿದೆ. ಈ ಸಂಬಂಧ ಕೆಲ ದಿನಗಳ ಹಿಂದೆ ಸಮಸ್ಯೆ ಉಂಟಾಗಿತ್ತು, ಈಗ ಬಗೆಹರಿದಿದೆ. ಸಿಡಿಪಿಒಗಳು ಇಲಾಖೆಯಿಂದ ಹಣ ಬಿಡುಗಡೆ ಮಾಡ್ತಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ