ದಾವಣಗೆರೆ: ಕೋವಿಡ್ ಕೇರ್ ಸೆಂಟರ್ನಲ್ಲಿ ರೇಣುಕಾಚಾರ್ಯ ನಿನ್ನೆಯಿಂದ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದು, ರಸಮಂಜರಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಬಳಿ ಇರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದು, ‘ಯಾರೇ ನೀನು ರೋಜಾ ಹೂವೆ’ ಹಾಡಿಗೆ ಹೆಜ್ಜೆ ಹಾಕಿ ಸೋಂಕಿತರನ್ನು ರಂಜಿಸಿದರು.
ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹಮ್ಮಿಕೊಂಡಿರುವ ರಸಮಂಜರಿ ಕಾರ್ಯಕ್ರಮಕ್ಕೆ ಬೆಂಗಳೂರಿನ ಕಲಾ ತಂಡವನ್ನು ಕರೆಸಲಾಗಿತ್ತು. ಕೋವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರನ್ನು ರಂಜಿಸಲು ಶಾಸಕ ರೇಣುಕಾಚಾರ್ಯ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು. ಸೋಂಕಿತರು ತಮ್ಮ ನೋವುಗಳನ್ನು ಮರೆತು ಶಾಸಕರ ಜೊತೆ ಹೆಜ್ಜೆ ಹಾಕಿ ಸಂತಸಪಟ್ಟರು.
ಗುರುವಾರದಿಂದ ಮೂರು ದಿನ ಕೋವಿಡ್ ಕೇರ್ ಸೆಂಟರ್ನಲ್ಲೇ ವಾಸ್ತವ್ಯ ಹೂಡಿರುವ ಶಾಸಕರು, ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಲಿದ್ದಾರೆ.
ಈ ಹಿಂದೆ ಶಾಸಕ ರೇಣುಕಾಚಾರ್ಯ ಹೊನ್ನಾಳಿ-ನ್ಯಾಮತಿ ತಾಲೂಕುಗಳ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಅಲ್ಲದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಬಾಲಕನ ಜೊತೆ ಪೊಗರು ಚಿತ್ರದ ‘ಖರಾಬು ಬಾಸು ಖರಾಬು’ ಸಾಂಗ್ಗೆ ಸಖತ್ ಹೆಜ್ಜೆ ಹಾಕಿದ್ದರು. ಶಾಸಕರು ಡ್ಯಾನ್ಸ್ ಮಾಡುವುದರ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದು, ಕೊನೆಗೆ ಪತ್ನಿಯ ಜೊತೆ ‘ಕುಲದಲ್ಲಿ ಕೀಳ್ಯಾವುದೋ’ ಎನ್ನುವ ಹಾಡಿಗೆ ಹೆಜ್ಜೆ ಹಾಕಿ ಸೋಂಕಿತರನ್ನು ಹುರಿದುಂಬಿಸುವ ಕೆಲಸ ಮಾಡಿದರು.