ದಾವಣಗೆರೆ: ಅಸಲಿ ಬಂಗಾರ ಎಂದು ನಂಬಿಸಿ ಹಣ ಪಡೆದು ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ವಂಚನೆ ಮಾಡಿದ್ದವನನ್ನು ಜಗಳೂರು ಪೊಲೀಸರು ಖೆಡ್ಡಕ್ಕೆ ಕೆಡವಿದ್ದಾರೆ. ತಮಿಳುನಾಡು ರಾಜ್ಯದ ಚೆನ್ನೈ ನಗರದ ಅಂಬತ್ತೂರು ನಿವಾಸಿ ರಜನಿಕಾಂತ್ (40) ಮೋಸ ಹೋದವರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮದ ನಿವಾಸಿಯಾದ ವಿಜಯ್ ಕುಮಾರ (41), ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಭತ್ತನಹಳ್ಳಿ ಗ್ರಾಮ ನಿವಾಸಿ ಹನುಮಂತಪ್ಪ ಅಲಿಯಾಸ್ ಮೇಲ್ಪಾಡಿ ಹನುಮಂತಪ್ಪ (44) ರನ್ನು ಬಂಧಿಸಲಾಗಿದೆ.
ಆರೋಪಿತರು ನಮ್ಮ ಬಳಿ ಚಿನ್ನ ಇದೆ ಎಂದು ರಜಿನಿಕಾಂತ್ ಅವರಿಗೆ ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಹಣ ಪಡೆದು ವಂಚನೆ ಮಾಡಿದ್ದರು. ತಕ್ಷಣ ಜಗಳೂರು ಪೊಲೀಸ್ ಠಾಣೆಗೆ ಆಗಮಿಸಿದ ವಂಚಿತ ರಜಿನಿಕಾಂತ್ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಜಗಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಗುನ್ನೆ ನಂ-99/2022 ಕಲಂ-420 ರೆ/ವಿ 34 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ 4 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರ ಗಮನಕ್ಕೆ: ನಕಲಿ ಬಂಗಾರ ನೀಡಿ ವಂಚಿಸುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಸಾರ್ವಜನಿಕರು ಇಂತಹ ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸಿ, ನಕಲಿ ಬಂಗಾರ ನೀಡಿ ವಂಚಿಸುವಂತಹ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸರ ಗಮನಕ್ಕೆ ತರುವುದು ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಎಂದು ದಾವಣಗೆರೆ ಪೊಲೀಸ್ ಇಲಾಖೆ ತಿಳಿಸಿದೆ.
ಓದಿ: ಡಿಸಿಸಿ ಬ್ಯಾಂಕ್ ನಕಲಿ ಬಂಗಾರ ಪ್ರಕರಣ ಸಿಬಿಐಗೆ: ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ