ದಾವಣಗೆರೆ : ನಮ್ಮ ಹೊಲದಲ್ಲಿ ಚಿನ್ನದನಾಣ್ಯಗಳು ಸಿಕ್ಕಿವೆ ಎಂದು ವ್ಯಕ್ತಿಯೋರ್ವನನ್ನು ನಂಬಿಸಿ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ 2.50 ಲಕ್ಷ ರೂ. ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಘಟನೆ ದಾವಣಗೆರೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ ತಿಂಗಳಲ್ಲಿ ನಡೆದಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ದುರುಗಪ್ಪ ಎಂದು ಗುರುತಿಸಲಾಗಿದೆ. ಆರೋಪಿ ದುರುಗಪ್ಪ ಮಂಗಳೂರು ಮೂಲದ ಸೆಕ್ಯುರಿಟಿ ಕೆಲಸ ಮಾಡ್ತಾ ಜೀವನ ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ. ವಿಜಯ್ ಕುಮಾರ್ ಎಂಬುವರು ಮೋಸಕ್ಕೊಳಗಾದವರು.
ಏನಿದು ಪ್ರಕರಣ? : ಆರೋಪಿ ದುರುಗಪ್ಪ ಮೋಸಕ್ಕೊಳಗಾದ ವಿಜಯ್ ಕುಮಾರ್ಗೆ ದೂರವಾಣಿ ಕರೆ ಮಾಡುವ ಮೂಲಕ ತನ್ನ ಹೆಸರು ವೆಂಕಟೇಶ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ, ನಮ್ಮ ಪಕ್ಕದ ಹೊಲದಲ್ಲಿ ಬಂಗಾರದ ನಾಣ್ಯಗಳು ದೊರೆತಿವೆ. ನಿಮಗೆ ಕಡಿಮೆ ಬೆಲೆಗೆ ಕೊಡಿಸುತ್ತೇನೆಂದು ನಂಬಿಸಿ ವಿಜಯ್ ಕುಮಾರ್ಗೆ ಎರಡು ಅಸಲಿ ಚಿನ್ನದ ನಾಣ್ಯಗಳನ್ನು ನೀಡಿ ನಂಬಿಕೆ ಬರುವಂತೆ ಮಾಡಿದ್ದಾನೆ. ಬಳಿಕ ಅರ್ಧ ಕೆಜಿಯಷ್ಟು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 2.50 ಲಕ್ಷ ರೂ. ಲಪಟಾಯಿಸಿದ್ದಾನೆ.
ವಂಚನೆಗೊಳಗಾದ ವಿಜಯ್ ಕುಮಾರ್ ಅವರು ನಾಣ್ಯಗಳನ್ನು ಪರಿಶೀಲಿಸಿದ ಬಳಿಕ ಇದು ನಕಲಿ ಚಿನ್ನ ಎಂದು ತಿಳಿದು ಬಂದಿದೆ. ತಕ್ಷಣ ಎಚ್ಚೆತ್ತು ವಂಚನೆಗೊಳಗಾದ ವಿಜಯ್ ಕುಮಾರ್ ದಾವಣಗೆರೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ತೆರಳಿ ಜನವರಿ ತಿಂಗಳಿನಲ್ಲಿ ದೂರು ನೀಡಿದ್ದರು. ಆರು ತಿಂಗಳ ಬಳಿಕ ಪೊಲೀಸರು ಆರೋಪಿ ದುರುಗಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ: ಪವರ್ ಪಾಲಿಟಿಕ್ಸ್ ಮಾಡದೆ ಪೀಪಲ್ ಪಾಲಿಟಿಕ್ಸ್ನಿಂದ ಮೋದಿ ಚಿರಸ್ಮರಣೀಯರಾಗಲಿದ್ದಾರೆ: ಸಿಎಂ