ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಗ್ಯಾಸ್ ಟ್ಯಾಂಕರ್ ಹಾಗೂ ಟೈರ್ ಸಾಗಣೆ ಮಾಡುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೆಂಕಿ ಅವಗಢ ಸಂಭವಿಸಿದ್ದು, ಮೂವರು ಮೃತಗಪಟ್ಟಿದ್ದಾರೆ.
ಗುಜರಾತ್ ಮೂಲದ ರಮೇಶ್, ಲಾದೂರಾಮ್ ಮೃತಪಟ್ಟ ಲಾರಿ ಚಾಲಕರು. ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ. ಜಾರ್ಖಂಡ್ ರಾಜ್ಯದ ನೋಂದಣಿ ಹೊಂದಿರುವ ಗ್ಯಾಸ್ ಟ್ಯಾಂಕರ್ ಹೊಸಪೇಟೆಯಿಂದ ಚಿತ್ರದುರ್ಗದ ಕಡೆಗೆ ಹೋಗುತ್ತಿತ್ತು. ಚಿತ್ರದುರ್ಗ ಕಡೆಯಿಂದ ಹೋಗುತ್ತಿದ್ದ ಹರಿಯಾಣ ನೋಂದಣಿ ಸಂಖ್ಯೆಯ ಲಾರಿಯಲ್ಲಿ ಟೈರ್ಗಳಿದ್ದವು. ಈ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತು.
ಬೆಂಕಿ ನಂದಿಸಲು ಅಗ್ನಿ ಶ್ಯಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಒಂದು ಲಾರಿಯಲ್ಲಿ 2 ದೇಹ ಹಾಗೂ ಮತ್ತೊಂದು ಲಾರಿಯಲ್ಲಿ 1 ದೇಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಯುತ್ತಿರುವ ಕಾರಣದಿಂದಾಗಿ ಅರ್ಧ ರಸ್ತೆಯನ್ನು ಮುಚ್ಚಲಾಗಿತ್ತು. ಆದ್ರೆ, ಲಾರಿ ಚಾಲಕರಿಗೆ ಇದು ಗೊತ್ತಾಗದ ಕಾರಣ ಹಾಗೂ ವೇಗವಾಗಿ ಚಲಿಸುತ್ತಿದ್ದರಿಂದ ಈ ದುರಂತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.