ಹರಿಹರ (ದಾವಣಗೆರೆ): ತಾಲೂಕಿನ ಹಲಸಬಾಳು ಮತ್ತು ರಾಜನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 22 ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಒಡೆದು ರೈತರ ಜಮೀನು ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ಕಳೆದ ತಿಂಗಳು 22 ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಚಾಲನೆ ನೀಡಿದ್ದರು. ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಕನಸಿನಂತೆ ಆ ಭಾಗದ ಜನರ ಜೀವನಾಡಿಯಾಗಿ ಈ ಯೋಜನೆ ಕಾರ್ಯನಿರ್ವಹಿಸಲಿದೆ. ಈ ವರ್ಷದಲ್ಲಿ 180ಕ್ಕೂ ಹೆಚ್ಚು ದಿನಗಳ ಕಾಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಂಸದರು ಹೇಳಿದ್ದರು. ಆದರೆ, ಈ ವರ್ಷದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ ತಿಂಗಳೊಳಗೆ ಪೈಪ್‌ಲೈನ್ ಒಡೆದಿದೆ. ಇದರಿಂದ ಹೆದ್ದಾರಿ ಪಕ್ಕದಲ್ಲಿದ್ದ ಹೊದೆಗೌಡ್ರು ನಿಂಗಪ್ಪ ಎಂಬುವವರ 10 ಎಕ್ಕರೆ ಜಮೀನಿನಲ್ಲಿ ಇತ್ತೀಚೆಗೆ ನಾಟಿ ಮಾಡಲಾಗಿದ್ದ ಭತ್ತದ ಬೆಳೆ ಕೊಚ್ಚಿ ಹೋಗಿದೆ. ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಇಂಜಿನಿಯರ್ ಅನ್ನು ರೈತರು ತರಾಟೆಗೆ ತೆಗೆದುಕೊಂಡರು.
ನಮ್ಮ ಜಮೀನುಗಳಲ್ಲಿ ಪೈಪ್ ಲೈನ್ ಹಾಕುವಾಗ ತರಳಬಾಳು ಶ್ರೀಗಳ ಮುಖ ನೋಡಿಕೊಂಡು ಅವಕಾಶ ನೀಡಿದ್ದೆವು. ಆದರೆ, ಎಲ್‌ಎನ್‌ಟಿ ಕಂಪನಿಯವರು ಕಳಪೆ ಕಾಮಗಾರಿಯನ್ನು ಮಾಡಿರುವುದರಿಂದ ತಿಂಗಳಿಗೆ ಮೂರು ಬಾರಿ ಪೈಪ್ ಒಡೆದು ರೈತರ ಜಮೀನುಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗಿದೆ. ಪೈಪ್ ಒಡೆದು ಬೆಳೆ ನಷ್ಟವಾದಾಗ ಶ್ರೀಗಳ ಹೆಸರು ಹೇಳಿ ಅಧಿಕಾರಿಗಳು ತಪ್ಪಿಸಿಕೊಳ್ಳತ್ತಾರೆ. ಇಲ್ಲಿಯ ರೈತರ ಬೆಳೆಯನ್ನು ಹಾಳುಮಾಡಿ, ನೀರು ಸರಬರಾಜು ಮಾಡಿ ಎಂದು ಶ್ರೀಗಳು ಹೇಳಿಲ್ಲ. ನಿಮ್ಮ ಕಳಪೆ ಕಾಮಗಾರಿಗೆ ನೀವೇ ಹೊಣೆ. ಉತ್ತಮ ಕಾಮಗಾರಿಯನ್ನು ಮಾಡಿ, ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಇದೇ ಸಮಸ್ಯೆ ಕಾಡುತ್ತಿದ್ದು, ಸ್ಥಳೀಯ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. ಎಷ್ಟು ಬಾರಿ ಪೈಪ್‌ಗಳಿಗೆ ತ್ಯಾಪೆ ಹಾಕಿದರೂ ಮತ್ತೆ-ಮತ್ತೆ ಬೇರೆ ಸ್ಥಳಗಳಲ್ಲಿ ನೀರಿನ ರಭಸಕ್ಕೆ ಪೈಪ್ ಒಡೆದು ಸರಬರಾಜು ನಿಲ್ಲುತ್ತದೆ. ತಿಂಗಳಲ್ಲಿ ಎರಡರಿಂದ ಮೂರು ಬಾರಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಸ್ಥಳೀಯ ರೈತ ಬಿ.ಜೆ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.