ದಾವಣಗೆರೆ: ಮಾಯಕೊಂಡ ಪೊಲೀಸರು ವಿಚಾರಣೆಗೆ ಕರೆ ತಂದಿದ್ದ ವೇಳೆ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪೊಲೀಸರ ಥಳಿತದಿಂದ ಮೃತಪಟ್ಟಿದ್ದಾರೆ ಎನ್ನಲಾದ ವಿಟ್ಟಲಾಪುರದ ಮರಳಸಿದ್ಧಪ್ಪನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸ್ಥಳದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮತ್ತು ಎಸ್ಪಿ ಹನುಮಂತರಾಯ ಹಾಜರಿದ್ದರು.
ಈ ವೇಳೆ ಮಾತನಾಡಿದ ಎಸ್ಪಿ ಹನುಮಂತರಾಯ, ಘಟನೆ ಸಂಬಂಧ ಪಿಎಸ್ಐ, ಠಾಣಾಧಿಕಾರಿ, ಹೆಡ್ ಕಾನ್ ಸ್ಟೇಬಲ್ ನಾಗರಾಜ್ ಅವರನ್ನು ನಿನ್ನೆ ಅಮಾನತು ಮಾಡಲಾಗಿತ್ತು. ಇಂದು ಮತ್ತೋರ್ವ ಪೊಲೀಸ್ ಸಿಬ್ಬಂದಿ ರಂಗಸ್ವಾಮಿ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದು, ಮುಂದಿನ ತನಿಖೆ ಅವರೇ ನಡೆಸಲಿದ್ದಾರೆ ಎಂದರು.
ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾತನಾಡಿ, ಮೃತನ ಪತ್ನಿಗೆ 4,12,500 ರೂಪಾಯಿ ಪರಿಹಾರ ನೀಡಲಾಗಿದೆ. ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಉಳಿದ ನಾಲ್ಕು ಲಕ್ಷದ 12 ಸಾವಿರದ ಐನೂರು ರೂಪಾಯಿ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಕಾನೂನು ರೀತಿಯಲ್ಲಿ ನಡೆಸಲಾಗಿದೆ. ಈಗಾಗಲೇ ಘಟನೆಗೆ ಕಾರಣರಾಗಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿದೆ. ಯಾರೇ ತಪ್ಪು ಮಾಡಿದ್ರೂ ಕಾನೂನು ರೀತಿಯ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.