ಹರಿಹರ: ಮಾಸ್ಕ್ ಧರಿಸದೇ ಓಡಾಡುವ ಸಾರ್ವಜನಿಕರಿಂದ ಅಧಿಕಾರಿಗಳ ತಂಡ ದಂಡ ವಸೂಲಿ ಮಾಡುತ್ತಿದ್ದು, ಇದುವರೆಗೆ ನಗರದಲ್ಲಿ 60 ಸಾವಿರ ರೂ. ಹಣ ಸಂಗ್ರಹಿಸಲಾಗಿದೆ.
ನಗರಸಭೆ, ಕಂದಾಯ, ಪೊಲೀಸ್ ಸಿಬ್ಬಂದಿ ತಂಡ ನಿತ್ಯವೂ ನಗರದಲ್ಲಿ ಅನಗತ್ಯವಾಗಿ ಮಾಸ್ಕ್ ಧರಿಸದೇ ಓಡಾಡುವವರಿಂದ ದಂಡ ವಸೂಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗಾಂಧಿ ವೃತ್ತ, ಶಿವಮೊಗ್ಗ ವೃತ್ತ, ಮುಖ್ಯ ರಸ್ತೆ, ತರಕಾರಿ, ಹಣ್ಣು ಮಾರುಕಟ್ಟೆ, ಅಂಗಡಿ, ಮುಂಗಟ್ಟುಗಳ ಬಳಿ ಸಂಚರಿಸುವ ಈ ತಂಡ, ಸಾರ್ವಜನಿಕರು, ವ್ಯಾಪಾರಿಗಳು ಮಾಸ್ಕ್ ಧರಿಸದೇ ಇದ್ದರೆ ತಲಾ 200 ರೂ. ದಂಡ ವಿಧಿಸುತ್ತಿದೆ. ಜೊತೆಗೆ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ವೈರಸ್ ಪ್ರಭಾವ ಕಡಿಮೆಯಾಗುವವರೆಗೂ ಈ ತಂಡ ಕಾರ್ಯಾಚರಣೆ ನಡೆಸಲಿದೆ ಎಂದು ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್ ತಿಳಿಸಿದರು.