ದಾವಣಗೆರೆ : ರಾತ್ರೋರಾತ್ರಿ 20 ಎಕರೆಯಲ್ಲಿ ಬೆಳೆದ ಮೆಕ್ಕೆಜೋಳವನ್ನ ದುಷ್ಕರ್ಮಿಗಳು ಕುರಿ ಬಿಟ್ಟು ಮೇಯಿಸಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನಡೆದಿದೆ. ಹಾಲಮ್ಮ, ಚಂದ್ರಶೇಖರ್, ಗಂಗಾಧರ್, ಈರಮ್ಮ ಎಂಬುವರು ಬೆಳೆದಿದ್ದ ಮೆಕ್ಕೆಜೋಳವನ್ನು ಸಂಪೂರ್ಣ ಮೇಯಿಸಲಾಗಿದೆ.
ಸುಮಾರು ಎಂಟಕ್ಕೂ ಅಧಿಕ ಕುಟುಂಬಗಳು ಒಟ್ಟು 20ಕ್ಕೂ ಹೆಚ್ಚು ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಆದರೆ, ನಿನ್ನೆ ರಾತ್ರಿ ಕುರಿಗಾಹಿಗಳು ಮೆಕ್ಕೆಜೋಳದ ಬೆಳೆಯನ್ನ ಸಂಪೂರ್ಣವಾಗಿ ಮೇಯಿಸಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದಿಂದ ರೈತರು ಕಣ್ಣೀರು ಹಾಕಿದರು. ಈ ಸಂಬಂಧ ಸಂತ್ರಸ್ತ ರೈತರು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.