ಮಂಗಳೂರು: ಮದುವೆ ನಿಶ್ಚಿತಾರ್ಥವಾಗಿದ್ದ ಯುವಕನನ್ನು ಅಪಹರಿಸಿ ಕೊಲೆಗೈದ ಪ್ರಕರಣವು 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1.38 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶ ಟಿ.ಪಿ.ರಾಮಲಿಂಗಂ ಆದೇಶಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾವಾರ ಮೂಲದ ಆನಂದ ನಾಯ್ಕ್ ಮದುವೆಯಾಗಿದ್ದರೂ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆಗೆ ಮನೆಯವರು ದಿಡುಪೆಯ ನಿವಾಸಿ ಮೃತ ಸುರೇಶ್ ನಾಯ್ಕ್ರೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಆದರೆ ಆರೋಪಿ ಆನಂದ ನಾಯ್ಕ್ 2017 ಜುಲೈ 29ರಂದು ಸುರೇಶ್ ನಾಯ್ಕ್ನನ್ನು ಉಪಾಯವಾಗಿ ಉಜಿರೆಗೆ ಬರುವಂತೆ ಮಾಡಿ ಪ್ರವೀಣ್ ನಾಯ್ಕ್, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಕಾರಿನಲ್ಲಿ ಪಟ್ರಮೆ-ಧರ್ಮಸ್ಥಳ ರಸ್ತೆಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕತ್ತಿಗೆ ಹಗ್ಗ ಬಿಗಿದು ಕೊಲೆಗೈದಿದ್ದರು.
ನಂತರ ಮೃತದೇಹವನ್ನು ಪೆಟ್ರೋಲ್ ಹಾಕಿ ಗುರುತು ಸಿಗದಂತೆ ಸುಟ್ಟು ಹಾಕಿದ್ದರು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1.38 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ಒಂದು ಲಕ್ಷ ರೂ. ಮೊತ್ತವನ್ನು ಮೃತರ ತಾಯಿಗೆ ನೀಡಲು ಆದೇಶಿಸಿದ್ದು, ಅಲ್ಲದೆ ಹೆಚ್ಚುವರಿ ಗರಿಷ್ಠ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.