ಮಂಗಳೂರು : ಮೀನು ಸಾಗಾಟದ ವಾಹನಕ್ಕೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಇಂದು ಮುಂಜಾನೆ ನಡೆದಿದೆ. ಮೃತ ಯುವಕನನ್ನು ಉಳ್ಳಾಲ ಕೋಟೆಕಾರ್ ನಿವಾಸಿ ಹನೀಫ್ ಎಂಬವರ ಪುತ್ರ ಅಝ್‌ವೀನ್ (21)ಎಂದು ಗುರುತಿಸಲಾಗಿದೆ.
ಮೃತ ಅಝ್‌ವೀನ್ ಇಂದು ಬೆಳಗ್ಗೆ 3:30ರ ಸುಮಾರಿಗೆ ಬೈಕ್ನಲ್ಲಿ ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯ ಮುಂಭಾಗದಲ್ಲಿ ಚಲಿಸುತ್ತಿದ್ದ ಮೀನು ಸಾಗಣೆ ವಾಹನದ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಹಿಂದಿನಿಂದ ಮೀನು ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅಝ್ವೀನ್ನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆದಾಗಲೇ ಅಝ್‌ವೀನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತರ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಉಳ್ಳಾಲದಲ್ಲಿ ಸರಣಿ ಅಪಘಾತ : ಕರ್ನಾಟಕ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು, ಮತ್ತೊಬ್ಬ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ಮಂಗಳವಾರ ಸಂಜೆ ಕೋಟೆಕಾರ್ ಬೀರಿ ಜಂಕ್ಷನ್ನಲ್ಲಿ ನಡೆದಿದೆ. ಅಡ್ಕ ನಿವಾಸಿ ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್(65) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷ್ಣ ಶೆಟ್ಟಿ ಅವರು ಅಡ್ಕದ ತನ್ನ ಮನೆಯಿಂದ ಸ್ಕೂಟರಲ್ಲಿ ಬೀರಿಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ವೇಗವಾಗಿ ಕಾಸರಗೋಡಿಗೆ ತೆರಳುತ್ತಿದ್ದ ಸಾರಿಗೆ ಬಸ್ ಕೃಷ್ಣ ಶೆಟ್ಟಿ ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವ ವಿವಾಹಿತೆ ಅನುಮಾನಾಸ್ಪದ ಸಾವು : ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠದಲ್ಲಿ ನಡೆದಿದೆ. ಮೃತರನ್ನು ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಜಾತ ಶೆಟ್ಟಿ (38) ಎಂದು ಗುರುತಿಸಲಾಗಿದೆ.
ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬವರೊಂದಿಗೆ ಸುಜಾತಾ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಅಕ್ಟೋಬರ್ 8ರಂದು ಸುಜಾತ ಅವರ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯಲ್ಲಿ ಕಂಡುಬಂದಿತ್ತು. ಈ ಸಂಬಂಧ ಪುಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಅಕ್ಟೋಬರ್ 9ರಂದು ತೌಡುಗೋಳಿ ಸಮೀಪ ಸುಜಾತ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಮೃತ ಸುಜಾತ ಕುಟುಂಬಸ್ಥರು ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪ್ರಕರಣದ ಸತ್ಯಾಸತ್ಯತೆ ತಿಳಿದು ಬರಲಿದೆ. ಸುಜಾತಾ ಅವರು ತೊಕ್ಕೊಟ್ಟು ಬ್ಯೂಟಿಪಾರ್ಲರ್ ನಲ್ಲಿ ಈ ಹಿಂದೆ ಬ್ಯೂಟೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು.