ಮಂಗಳೂರು: ಗಣೇಶೋತ್ಸವ, ದಸರಾ ಹಬ್ಬದ ಸಂದರ್ಭ ಅಲ್ಲಲ್ಲಿ ಪೆಂಡಾಲ್ನಲ್ಲಿ ಗಣೇಶ, ಶಾರದೆಯ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುವುದು ಸಾಮಾನ್ಯ. ಅದಕ್ಕಾಗಿ ಮೂರ್ತಿ ರಚನಾಕಾರರಿಂದ ಶಾರದೆ, ಗಣೇಶನ ಮೂರ್ತಿಯನ್ನು ಮಾಡಿಸಲಾಗುತ್ತದೆ. ಆದರೆ ಮಂಗಳೂರಿನಲ್ಲೊಬ್ಬ ಯುವಕ ತನ್ನ ಸಮಯನ್ನು ಪೂರ್ತಿಯಾಗಿ ವಿನಿಯೋಗಿಸಿ ಕೈಯ್ಯಾರೆ ಶಾರದೆ, ಗಣಪತಿ ಮೂರ್ತಿ ತಯಾರಿಸಿ, ತಾನೇ ಪೂಜೆ ಮಾಡಿ, ತಾನೇ ಮೂರ್ತಿಯ ನಿಮ್ಮಜ್ಜನ ಮಾಡುವ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಕುಂದಾಪುರ ಮೂಲದ ಸದ್ಯ ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ ವಾಸುಕಿ ಹೆಬ್ಬಾರ್ ಎಂಬ 23ರ ಯುವಕ ಈ ರೀತಿ ವಿಶೇಷವಾಗಿ ಶಾರದೆಯನ್ನು ಆರಾಧಿಸುತ್ತಿದ್ದಾರೆ. ಇವರು ಗಣಪತಿ, ಶಾರದೆಯ ಮೂರ್ತಿ ರಚಿಸಿ ಗಣೇಶೋತ್ಸವ, ದಸರಾ ಆಚರಿಸುತ್ತಿದ್ದಾರೆ. ಪುಟ್ಟ ಬಾಲಕನಿರುವಾಗಲೇ ವಾಸುಕಿ ತಾಯಿಯನ್ನು ಕಳೆದುಕೊಂಡು ಅಜ್ಜ ರತ್ನಾಕರ್ ಹೆಬ್ಬಾರ್ ಹಾಗೂ ಅಜ್ಜಿ ಜಯಂತಿ ಹೆಬ್ಬಾರ್ ಆಶ್ರಯದಲ್ಲಿ ಬೆಳೆದರು. ಕುಂದಾಪುರದಲ್ಲಿದ್ದ ವಾಸುಕಿ, ಬಾಲ್ಯದಿಂದಲೇ ಶ್ರೀಧರ ಗುಡಿಗಾರ್ ಅವರು ಗಣಪತಿ ವಿಗ್ರಹಗಳನ್ನು ಮಾಡುವುದನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಇದೇ ಕುತೂಹಲದಿಂದ 2ನೇ ತರಗತಿಯಿಂದಲೇ ಗಣಪತಿ ವಿಗ್ರಹ ರಚಿಸಿ ಆರಾಧಿಸಲು ಆರಂಭಿಸಿದ್ದಾರೆ. ಯಾವುದೇ ತರಬೇತಿಯಿಲ್ಲದೆ ಆಸಕ್ತಿಯಿಂದಲೇ ವಿಗ್ರಹ ರಚನೆಗೆ ತೊಡಗಿಸಿಕೊಂಡ ವಾಸುಕಿ, ಕಳೆದ 15 ವರ್ಷಗಳಿಂದ ಗಣೇಶನ ಆರಾಧನೆ, 12 ವರ್ಷಗಳಿಂದ ಶಾರದೆಯ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ.
ಕಾಲೇಜು ವ್ಯಾಸಂಗದ ವೇಳೆ ವರ್ಷಪೂರ್ತಿ ಸ್ವಿಗ್ಗಿಯಲ್ಲಿ ದುಡಿದು ಅದರ ಹಣವನ್ನು ಗಣೇಶನ ಹಬ್ಬ, ದಸರಾವನ್ನು ತಕ್ಕಮಟ್ಟಿಗೆ ವೈಭವದಿಂದ ಮಾಡಲು ಆರಂಭಿಸಿದ್ದಾರೆ. ಕೆಲಸ ಮಾಡಲಾರಂಭಿಸಿದ ಬಳಿಕ ಎರಡು ತಿಂಗಳ ಕಾಲ ರಜೆ ಪಡೆದು ಈ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅಷ್ಟೊಂದು ರಜೆ ಸಿಕ್ಕದ ಕಾರಣ ಕೆಲಸವನ್ನೇ ತೊರೆದಿದ್ದಾರಂತೆ. ಅಜ್ಜ ದೇವರಿಗೆ ಪ್ರಭಾವಳಿ, ಬೆಳ್ಳಿಯ ಆಭರಣಗಳನ್ನು ಮಾಡಿಕೊಟ್ಟಿದ್ದು, ಉಳಿದೆಲ್ಲಾ ಖರ್ಚು ವೆಚ್ಚವನ್ನು ಇವರೇ ಭರಿಸುತ್ತಿದ್ದಾರೆ. ವ್ರತಾಚರಣೆಯಲ್ಲಿ ಇದ್ದುಕೊಂಡೇ ಹೊಟೇಲ್, ಹೊರಗಡೆ ಎಲ್ಲೂ ಆಹಾರ ಸೇವಿಸದೆ ವಿಗ್ರಹ ರಚನೆ ಮಾಡುತ್ತಾರಂತೆ.
ಕಳೆದ ಹತ್ತು ವರ್ಷದಿಂದ ಶಕ್ತಿನಗರದ ಮನೆಯಲ್ಲಿ ದೇವರ ಆರಾಧನೆಯಲ್ಲಿ ತೊಡಗಿದ್ದಾರೆ. ಕೊರೊನಾ ಬಳಿಕ ದಸರಾ, ಗಣೇಶೋತ್ಸವಕ್ಕೆ ನೂರಾರು ಮಂದಿ ಸೇರುತ್ತಾರೆ. ಇವರು ಲಲಿತಾ ಪಂಚಮಿಯಂದು ಶಾರದಾ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಾರೆ. ವಿಜಯದಶಮಿಯಂದು ಪೂಜೆ ಮಾಡಿ ಮರುದಿನ ವೈಭವದಿಂದ ಮೆರವಣಿಗೆ ಮಾಡಿ ಸಿಂಟೆಕ್ಸ್‌ನಲ್ಲಿ ವಿಗ್ರಹ ಜಲಸ್ತಂಭನ ಮಾಡುತ್ತಾರೆ. ಮುಂದಕ್ಕೆ ಇನ್ನೂ ವೈಭವದಿಂದ ದಸರಾ, ಗಣೇಶನ ಹಬ್ಬ ಮಾಡಿ ನಗರದ ಮಹಮ್ಮಾಯಿ ಕೆರೆಯಲ್ಲಿ ದೇವರ ವಿಗ್ರಹ ಜಲಸ್ತಂಭನ ಮಾಡುವ ಹಂಬಲ ಇವರಿಗಿದೆ.
ವಾಸುಕಿ ಹೆಬ್ಬಾರ್ ಮಾತನಾಡಿ, "2007ರಿಂದ ಗಣಪತಿ ವಿಗ್ರಹವನ್ನು ಮಾಡಲು ಆರಂಭಿಸಿದೆ. 2011ರಲ್ಲಿ ಶಾರದಾ ವಿಗ್ರಹ ಮಾಡಲು ಶುರು ಮಾಡಿದೆ. 2008ರಲ್ಲಿ ತಾಯಿ, 2018ರಲ್ಲಿ ಅಜ್ಜ ತೀರಿಕೊಂಡ ಕಾರಣ ಆ ಎರಡು ವರ್ಷಗಳು ಮಾಡಿಲ್ಲ. ಮೂರ್ತಿಗಳನ್ನು ನಾನೇ ತಯಾರಿಸಿ, ಹಲವು ವರ್ಷಗಳಿಂದ ಆರಾಧನೆ ಮಾಡುತ್ತಾ ಬಂದಿದ್ದೇನೆ. ನಾನೇ ಪೂಜೆ, ನೈವೇದ್ಯ ಮಾಡುತ್ತೇನೆ" ಎನ್ನುತ್ತಾರೆ.
ಇದನ್ನೂ ಓದಿ: ಮೈಸೂರು ದಸರಾ ವೈಭವ: ಫೋಟೋಗಳಲ್ಲಿ ನೋಡಿ..