ಮಂಗಳೂರು : ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತೆ ಕ್ರಮಗಳೊಂದಿಗೆ ಸಂಪ್ರದಾಯದ ಪ್ರಕಾರ ನವೆಂಬರ್ ಅಂತ್ಯದೊಳಗೆ ಯಕ್ಷಗಾನ ಪ್ರದರ್ಶನ ಆರಂಭಿಸಲು ಅವಕಾಶ ನೀಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಯಕ್ಷಗಾನ ಮೇಳಗಳ ಸಂಚಾಲಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಸರಿಸುಮಾರು ಒಂದು ಸಾವಿರಕ್ಕೂ ಅಧಿಕ ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ ಎಂದರು.
ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಬಯಲಾಟ ಆರಂಭವಾಗಲಿದ್ದು, ಕಲಾವಿದರ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆದ್ಯ ಕರ್ತವ್ಯ ಆಗಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಆರೋಗ್ಯ ಇಲಾಖೆಯ ವತಿಯಿಂದ ಯಕ್ಷಗಾನ ಕಲಾವಿದರು ಯಕ್ಷಗಣ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ಯಕ್ಷಗಾನ ಮೇಳಗಳಲ್ಲಿಯೂ ಸಹ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು ಎಂದು ಹೇಳಿದರು.
ಎಲ್ಲಾ ಕಲಾವಿದರು ಹೊಸ ಹುಮ್ಮಸ್ಸಿನಿಂದ ಮಾನಸಿಕ ಮತ್ತು ದೈಹಿಕವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯುವ ಕಲಾವಿದರ ಕೆಲಸವಿಲ್ಲದ ಕೂರಬಾರದು ಎಂದರು.
ಸಭೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಕಟೀಲು ದೇವಳದ ಆಡಳಿತ ಮೊಕ್ತೇಸರ ಹರಿ ಅಸ್ರಣ್ಣ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್, ಯಕ್ಷಗಾನ ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ ,ಸರಪಾಡಿ ಅಶೋಕ್ ಶೆಟ್ಟಿ, ಸೀತಾರಾಮ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.