ಪುತ್ತೂರು: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ (95) ಮಂಗಳವಾರ ನಿಧನರಾದರು. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪದ್ಯಾಣದಲ್ಲಿ 1927ರಲ್ಲಿ ಜನಿಸಿದ ಪೆರುವೋಡಿ ಪ್ರಸಿದ್ಧ ಧರ್ಮಸ್ಥಳ ಮೇಳಕ್ಕೆ ಸೇರಿ ಬಳಿಕ ಹಲವು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದ ನಾರಾಯಣ ಭಟ್ ಅವರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದು ಕೊಟ್ಟಿದ್ದಾರೆ. ‘ಪಾಪಣ್ಣ ವಿಜಯ’ ಪ್ರಸಂಗದ ಪಾಪಣ್ಣ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ.
ದಮಯಂತಿ ಪುನರ್ ಸ್ವಯಂವರ ಪ್ರಸಂಗದ ಬಾಹುಕ ಪಾತ್ರಕ್ಕೆ ಹೊಸರೂಪ ನೀಡಿದ್ದಾರೆ. ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ ಅವರದಾಗಿದ್ದು, ತುಳು ಪ್ರಸಂಗಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಮೂಲ್ಕಿ ಮೇಳದ ಯಜಮಾನಿಕೆ ನಡೆಸಿದ್ದ ಸಂಘಟನಾ ಚತುರರೂ ಹೌದು. ಪೆರುವೋಡಿಯವರ ಕಲಾ ಬದುಕಿನ ಚಿತ್ರಣ-ಹಾಸ್ಯಗಾರನ ಅಂತರಂಗ ಪುಸ್ತಕವನ್ನು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದೆ. ಹಲವಾರು ಸಂಘ ಸಂಸ್ಥೆಗಳ ವಿವಿಧ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ಇದನ್ನೂ ಓದಿ: ಕೇರಳ: ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಆರ್.ಹರಿ (93) ನಿಧನ