ಮಂಗಳೂರು : ಯಕ್ಷಗಾನ ವೇಷಧಾರಿಯೊಬ್ಬರು ರಂಗಸ್ಥಳದಲ್ಲಿ ಪಾತ್ರ ಮಾಡುತ್ತಿರುವಾಗಲೇ ತಲೆತಿರುಗಿ ಬಿದ್ದಿರುವ ಘಟನೆ ನಿನ್ನೆ ಮೂಡುಬಿದಿರೆ ತಾಲೂಕಿನ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಿದೆ.
ಯಕ್ಷಗಾನದ ಖ್ಯಾತ ಕಲಾವಿದ ಮೋಹನ ಕುಮಾರ್ ಅಮ್ಮುಂಜೆಯವರು 'ಕರ್ಣಪರ್ವ'ದ 'ಅರ್ಜುನ' ಪಾತ್ರಧಾರಿಯಾಗಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆಯವರ 'ಕರ್ಣ' ಪಾತ್ರಧಾರಿಯಾಗಿ ಮುಖಾಮುಖಿಯಾಗಿದ್ದರು. ಅರ್ಜುನ - ಕರ್ಣ ಪಾತ್ರಗಳ ಮಾತಿನ ಸಮರವಾಗಿ ಕರ್ಣನ ವೀರರಸದ ಪದ್ಯಕ್ಕೆ ಗಣೇಶ ಶೆಟ್ಟಿ ಕನ್ನಡಿಕಟ್ಟೆಯವರು ಕುಣಿಯಲು ಆರಂಭಿದ್ದಾರೆ.
ಈ ಸಂದರ್ಭದಲ್ಲಿ ಸ್ವಲ್ಪ ಓಲಾಡುವಂತೆ ಆದ ಅರ್ಜುನ ಪಾತ್ರಧಾರಿ ಮೋಹನ ಕುಮಾರ್ ಅಮ್ಮುಂಜೆಯವರು, ಏಕಾಏಕಿ ಎರಡು ಹೆಜ್ಜೆ ಮುಂದೆ ಬಂದು ಮುಗ್ಗರಿಸಿ ಬಿದ್ದಿದ್ದಾರೆ. ರಂಗಸ್ಥಳದಲ್ಲಿದ್ದ ಹಿಮ್ಮೇಳ ಮುಮ್ಮೇಳದ ಕಲಾವಿದರು ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ತಿಳಿಯದೆ ಗಾಬರಿ ಬಿದ್ದಿದ್ದಾರೆ.
ಬಳಿಕ ಕರ್ಣ ಪಾತ್ರಧಾರಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆಯವರು ಉಪಚರಿಸಲು ಪ್ರಯತ್ನ ಪಟ್ಟಿದ್ದಾರೆ. ಬಳಿಕ ಕೊಂಚ ಹೊತ್ತಿನಲ್ಲಿಯೇ ಮೋಹನ್ ಕುಮಾರ್ ಅಮ್ಮುಂಜೆಯವರು ಚೇತರಿಕೆ ಕಂಡಿದ್ದಾರೆ.
ಓದಿ : 44ನೇ ವಯಸ್ಸಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸ್ ಆದ ಮಂಗಳೂರು ವಿವಿ ಕಾಲೇಜು ಅಟೆಂಡರ್
ಈ ಬಗ್ಗೆ ಸ್ವತಃ ಮೋಹನ ಕುಮಾರ್ ಅಮ್ಮುಂಜೆಯವರೇ ಆಡಿಯೋವೊಂದನ್ನು ಬಿಟ್ಟಿದ್ದು 'ತನಗೇನು ಆಗಿಲ್ಲ ಚೇತರಿಸಿಕೊಂಡಿದ್ದೇನೆ. ಕೊರೊನಾ ಲಾಕ್‌ಡೌನ್‌ನಿಂದ ಐದಾರು ತಿಂಗಳು ಯಕ್ಷಗಾನ ಇಲ್ಲದಿದ್ದರಿಂದ ಫೋಕಸ್ ಲೈಟ್‌ನಿಂದ ಸ್ವಲ್ಪ ತಲೆ ತಿರುಗಿ ಬಿದ್ದದ್ದು ಹೌದು. ಆದರೆ, ಯಕ್ಷಾಭಿಮಾನಿಗಳು ಗಾಬರಿಯಾಗುವುದು ಬೇಡ ಎಂದಿದ್ದಾರೆ.