ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯ ಎಸ್ಐ ಹಾಗೂ ಅವರ 22 ವರ್ಷದ ಪುತ್ರಿ ಮತ್ತು ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಕಡಬ ಉಭಯ ತಾಲೂಕಿನಲ್ಲಿ 5 ಮಂದಿಗೆ ಕೊರೊನಾ ದೃಢಪಟ್ಟಿದೆ.
ಮೂರು ದಿನಗಳ ಹಿಂದೆ ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗೆ ಕೊರೊನಾ ದೃಢವಾಗಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಯ ಎಸ್ಐ ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಅವರ ಪುತ್ರಿಗೂ ಸೋಂಕು ತಗುಲಿದೆ.
ಮೊದಲ ಸಂಡೇ ಲಾಕ್‌ಡೌನ್ ಸಂದರ್ಭ ಮಹಿಳಾ ಠಾಣೆಯ ಎಸ್ಐ ಮತ್ತು ಸಿಬ್ಬಂದಿ ಲಾಕ್‌ಡೌನ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರ ವಿಚಾರಣೆಗೆ ಹೋಗಿದ್ದರು. ಈ ವೇಳೆ ಠಾಣೆಯ ಕಾನ್ಸ್ಟೇಬಲ್ ಆರೋಪಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ನಂತರ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಉಳಿದ ಪೊಲೀಸರು ಸಹ ಹೋಮ್ ಕ್ವಾರಂಟೈನ್ ಆಗಿದ್ದರು.
ಇದೀಗ ಹೋಮ್ ಕ್ವಾರಂಟೈನ್ ಆಗಿದ್ದವರ ಪೈಕಿ ಎಸ್ಐಗೆ ಮತ್ತು ಕಾನ್ಸ್ಟೇಬಲ್ಗೆ ಕೊರೊನಾ ದೃಢಪಟ್ಟಿದೆ. ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ವೊಬ್ಬರಿಗೂ ಸೋಂಕು ದೃಢಪಟ್ಟಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ನಗರಸಭೆ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ 55 ವರ್ಷದ ವ್ಯಕ್ತಿ ಹಾಗೂ ಕಡಬ ತಾಲೂಕಿನ 34 ವರ್ಷದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ.