ಮಂಗಳೂರು : ಇತ್ತೀಚೆಗೆ ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡಲು ಪ್ರಯಾಣಿಕರು ಅಪಾಯಕ್ಕೆ ಸಿಲುಕುತ್ತಿರುವ ಪ್ರಕರಣಗಳು ಆಗಾಗ ಕಂಡುಬರುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 4 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಳು. ಈ ವೇಳೆ ಮಹಿಳೆಯನ್ನು ತಡೆದು ಪರೀಕ್ಷಿಸುವಾಗ ಯಂತ್ರದಲ್ಲಿ ಬೀಪ್ ಶಬ್ದ ಉಂಟಾಗಿದೆ. ಆಗ ಪರಿಶೀಲನೆ ನಡೆಸಿದಾಗ ಆಕೆಯ ದೇಹದಲ್ಲಿ ಚಿನ್ನದ ಇರುವಿಕೆಯನ್ನು ಸೂಚಿಸಿದೆ. ವಿದೇಶದಿಂದ ಬಂದ ಮಹಿಳೆ ತನ್ನ ಗುದನಾಳದಲ್ಲಿ 2 ಗೋಳಾಕಾರದ ವಸ್ತುಗಳನ್ನು ಅಡಗಿಸಿಟ್ಟುಕೊಂಡು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ಇದರಲ್ಲಿ 349 ಗ್ರಾಂ (ನಿವ್ವಳ) ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನವು ಸಿಕ್ಕಿದೆ. ಇದರ ಮೌಲ್ಯ ರೂ 20,41,650 ರೂ. ಎಂದು ಅಂದಾಜಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ಪ್ರಕರಣಗಳು..
ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ ಸಾಗಿಸುವಾಗ ಸಿಕ್ಕಿಬಿದ್ದ ಆರೋಪಿ: ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಕನೋರ್ವ ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಪ್ರಯಾಣಿಕನನ್ನು ಬಂಧಿಸಿ, ಆತನಿಂದ 600 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಕೋಲ್ಕತ್ತಾದಿಂದ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನನ್ನು ಅನುಮಾನದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಪೇಸ್ಟ್ ರೂಪದಲ್ಲಿ ಚಿನ್ನವನ್ನು ಏರ್ ಪಾಡ್ ಮಾಡಿ ಆಕ್ರಮ ಸಾಗಣೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೆಪ್ಟೆಂಬರ್ 23 ಮತ್ತು 24 ರಂದು ಬಂದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಆಕ್ರಮ ಚಿನ್ನ ಸಾಗಿಸುತ್ತಿದ್ದವರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಈ ವೇಲೆ ಎಚ್ಚೆತ್ತ ಕಸ್ಟಮ್ಸ್ ಅಧಿಕಾರಿಗಳು ವಿವಿಧ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರಿಂದ 24 ಕ್ಯಾರೆಟ್ ಪರಿಶುದ್ಧತೆಯ 775 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು. ಇದರ ಒಟ್ಟು ಮೌಲ್ಯ 46,52,270 ರೂ. ಎಂದು ಅಂದಾಜಿಸಲಾಗಿತ್ತು.
ಇದನ್ನೂ ಓದಿ : ಸೊಂಟ ಪಟ್ಟಿಯಲ್ಲಿ ₹1.58 ಕೋಟಿ ಮೌಲ್ಯದ ಚಿನ್ನ! ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಇಬ್ಬರು ಪ್ರಯಾಣಿಕರು
ದುಬೈನಿಂದ ಮಂಗಳೂರಿಗೆ ವಿವಿಧ ವಿಮಾನಗಳಲ್ಲಿ ಆಗಮಿಸುತ್ತಿದ್ದ ಐವರು ಪ್ರಯಾಣಿಕರನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದರು. ಸ್ಕ್ಯಾನಿಂಗ್, ಟ್ರಾಲಿ ಬ್ಯಾಗ್‌ಗಳನ್ನು ತೆರೆದು ಪರೀಕ್ಷಿಸಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು. ಚಿನ್ನದ ವಸ್ತುಗಳನ್ನು ಪ್ರಯಾಣಿಕರು ಅವರು ಧರಿಸಿರುವ ಒಳ ಉಡುಪುಗಳ ನಡುವೆ ಪೇಸ್ಟ್ ರೂಪದಲ್ಲಿ ಏರ್ ಪಾಡ್‌ಗಳ ಮೂಲಕ ತಮ್ಮ ಟ್ರಾಲಿ ಬ್ಯಾಗ್‌ಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು.
ಇದನ್ನೂ ಓದಿ : ಲ್ಯಾಪ್ಟಾಪ್ನಲ್ಲಿ ಕ್ರೆಡಿಟ್ ಕಾರ್ಡ್ನಂತೆ ಚಿನ್ನ ಬಚ್ಚಿಟ್ಟು ಸಾಗಣೆ ಯತ್ನ: ಸಿಕ್ಕಿಬಿದ್ದ ಪ್ರಯಾಣಿಕ