ಬಂಟ್ವಾಳ(ದಕ್ಷಿಣ ಕನ್ನಡ): ವಿಷ ಪದಾರ್ಥ ಸೇವಿಸಿದ ತಾಯಿ, ಮಗ ಸ್ನಾನ ಗೃಹದಲ್ಲಿ ಕುಸಿದು ಬಿದ್ದ ಘಟನೆ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ನರಿಕೊಂಬು ಗ್ರಾಮದಲ್ಲಿ ನಡೆದಿದೆ. ಇವರ ಪೈಕಿ ತಾಯಿ ಗಿರಿಜಾ (62) ಸಾವನ್ನಪ್ಪಿದ್ದರೆ, ಅವರ ಪುತ್ರ ರಾಮಚಂದ್ರ (40) ಸ್ಥಿತಿ ಚಿಂತಾಜನಕವಾಗಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಗಿರಿಜಾ ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ. ಅವರ ಪತಿ ನಿಧನ ಹೊಂದಿದ್ದಾರೆ. ಮೂವರು ಗಂಡು ಮಕ್ಕಳು ವಿವಿಧ ರೀತಿಯ ಅಂಗವೈಕಲ್ಯ ಹೊಂದಿದ್ದಾರೆ. ಈ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.
ಇವರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಬಾತ್ ರೂಂನಲ್ಲಿ ತಾಯಿ ಮತ್ತು ಮಗ ಕುಸಿದು ಬಿದ್ದಿರುವುದನ್ನು ಕಂಡ ಸಂಬಂಧಿ ಉಮಾನಾಥ ಎಂಬವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಜೀವಂತ ದಹನ: ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ವ್ಯಕ್ತಿ ಜೀವಂತ ದಹನವಾಗಿರುವ ಘಟನೆಯೊಂದು ಬೆಳ್ಳಾರೆ ಠಾಣಾ ವ್ಯಾಪ್ತಿಯ ಐವರ್ನಾಡು ಗ್ರಾಮದ ಪರ್ಲಿಕಜೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ (47) ಮೃತ ವ್ಯಕ್ತಿ. ಇಂದು ಬೆಳಗ್ಗೆ ಸುಧಾಕರ ಅವರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರೆ, ಮಗಳು ಶಾಲೆಗೆ ತೆರಳಿದ್ದಳು. ಈ ವೇಳೆ ಮನೆಗೆ ಬೆಂಕಿತಗುಲಿದೆ. ಸುಧಾಕರ ಅವರು ಅಸೌಖ್ಯಕ್ಕೀಡಾಗಿರುವ ಹಿನ್ನೆಲೆ ಅವರಿಗೆ ಹೊರಗೆ ಓಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಥಳದಲ್ಲಿಯೇ ಬೆಂಕಿಯಲ್ಲಿ ದಹಿಸಲ್ಪಟ್ಟು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.
ಮನೆಯೊಳಗೆ ಉರಿಸಿದ್ದ ದೀಪದಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.