ಬಂಟ್ವಾಳ(ದಕ್ಷಿಣ ಕನ್ನಡ): ಸಾಲದ ಆ್ಯಪ್ನವರ ಕಿರುಕುಳದಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವೀಟಾ ಮರೀನಾ ಡಿಸೋಜಾ (33) ಮೃತರು.
ಮರೀನಾ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹಾಗೂ ಅದಕ್ಕಾಗಿ ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡುವಂತೆ ತಿಳಿಸಿ ಲಿಂಕ್ ಇರುವ ಮೆಸೇಜ್ ಒಂದನ್ನು ಕಳುಹಿಸಿಕೊಟ್ಟಿದ್ದನು. ಅದರಂತೆ ಆ್ಯಪ್ ಡೌನ್‌ಲೋಡ್ ಮಾಡಿ ಅವರು ಕೊಟ್ಟಿರುವ ಲಿಂಕ್ ಮುಖೇನ ಮರೀನಾ ವ್ಯವಹರಿಸುತ್ತಿದ್ದರು. ಆರೋಪಿಗಳು ಮಹಿಳೆಯಿಂದ ಹಂತಹಂತವಾಗಿ ಒಟ್ಟು 20,29,100 ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಗೆ ಪಾವತಿಸಿಕೊಂಡು ಹಣ ಹಿಂತಿರುಗಿಸದೆ ಹಾಗೂ ದ್ವಿಗುಣ ಮಾಡಿಕೊಡದೆ ಮೋಸ ಮಾಡಿರುವುದಾಗಿ ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಸಿಟಿ ಬಸ್ ಚಾಲಕ ಆತ್ಮಹತ್ಯೆ: ಸಿಟಿ ಬಸ್ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿತ್ತು. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಸಾವಿಗೀಡಾಗಿದ್ದಾರೆ.
ಅವಿವಾಹಿತರಾಗಿರುವ ಜಗದೀಶ್ ಅವರು ಸ್ಟೇಟ್ ಬ್ಯಾಂಕ್ ಮತ್ತು ಕಿನ್ಯಾ ನಡುವೆ ಚಲಿಸುವ ಖಾಸಗಿ ಸಿಟಿ ಬಸ್‌ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 19ರ ಮುಂಜಾನೆ ಸೋಮೇಶ್ವರದ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಗದೀಶ್ ಅವರ ಪರ್ಸ್ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿತ್ತು.
ಇದನ್ನೂ ಓದಿ: ಮೈಸೂರು: ಮರ್ಯಾದೆಗೆ ಅಂಜಿ ವಿವಾಹಿತ ಮಹಿಳೆ, ಯುವಕ ಆತ್ಮಹತ್ಯೆಗೆ ಶರಣು