ಮಂಗಳೂರು : ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ, ನರಿ, ಕಾಡುಹಂದಿ ಸೇರಿದಂತೆ ನವಿಲುಗಳು ರನ್ ವೇನಲ್ಲಿ ಓಡಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ವಿಮಾನ ನಿಲ್ದಾಣ ಇರುವ ಪ್ರದೇಶ ಸೇರಿದಂತೆ ಆಸುಪಾಸಿನ ಕೆಂಜಾರು, ಅದ್ಯಪಾಡಿ ಪ್ರದೇಶಗಳು ಗುಡ್ಡಗಾಡಿನಿಂದ ಕೂಡಿದೆ. ಸಾಕಷ್ಟು ಮರಮಟ್ಟುಗಳು ಬೆಳೆದು ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿತ್ತು. ಹಿಂದೆ ಕೆಂಜಾರು ಪ್ರದೇಶದಲ್ಲಿ ಮಂಗಳೂರಿನೊಳಗೆ ಅಪರೂಪವಾಗಿರುವ ಸಿಂಗಲೀಕವನ್ನು ವಿದ್ಯಾರ್ಥಿಗಳ ತಂಡವೊಂದು ಪತ್ತೆ ಹಚ್ಚಿತ್ತು.
ಅಲ್ಲದೆ ಒಂದೆರಡು ವರ್ಷಗಳ ಹಿಂದೆ ನಗರದೊಳಗೆ ಕಾಣಿಸಿಕೊಂಡ ಕಾಡುಕೋಣವು ಇದೇ ಬಜ್ಪೆ ಪ್ರದೇಶದಿಂದ ಬಂದಿದ್ದವು ಎಂದು ಹೇಳಲಾಗಿತ್ತು. ಇತ್ತೀಚೆಗೆ ಮಂಗಳೂರಿನ ಮರೋಳಿ, ಕಂಕನಾಡಿ ಜನವಸತಿ ಪ್ರದೇಶದಲ್ಲೂ ಚಿರತೆಗಳು ಕಾಣಿಸಿದ್ದವು.
ಇದೀಗ ರನ್ ವೇನಲ್ಲಿ ಪ್ರಾಣಿಗಳು ಓಡಾಟ ನಡೆಸುತ್ತಿರುವುದು ಅಪಾಯಕ್ಕೆ ಆಹ್ವಾನವಿತ್ತಂತೆ. ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ಸಂದರ್ಭದಲ್ಲಿ ಪ್ರಾಣಿಗಳು ಓಡಾಟ ನಡೆಸಿದ್ದಲ್ಲಿ ಅವಘಡಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಈ ಬಗ್ಗೆ ಮಂಗಳೂರು ಡಿಎಫ್ಒ ಡಾ.ವೈ ಕೆ ದಿನೇಶ್ ಕುಮಾರ್ ಮಾಹಿತಿ ನೀಡಿ, ರನ್ ವೇನಲ್ಲಿ ಪ್ರಾಣಿಗಳ ಓಡಾಟ ನಡೆಸುತ್ತಿರುವ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ದೂರು ನೀಡಿದ್ದಾರೆ. ಅಧಿಕಾರಿಗಳ ಮನವಿಯ ಹಿನ್ನೆಲೆ ಎರಡು ಮೂರು ಬಾರಿ ಅರಣ್ಯ ಇಲಾಖೆ ಕೊಂಬಿಂಗ್ ನಡೆಸಿತ್ತು.
ಅದೇ ರೀತಿ ಇದೀಗ ಎರಡು ಮೂರು ಬೋನುಗಳನ್ನು ಇರಿಸಿ ಪ್ರಾಣಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈವರೆಗೆ ಯಾವುದೇ ಪ್ರಾಣಿ ಬೋನಿಗೆ ಬಿದ್ದಿಲ್ಲ. ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿವೆ.
ಚಿರತೆ ಸೇರಿದಂತೆ ಕಾಡುಪ್ರಾಣಿಗಳಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಮಾತ್ರ ಚಿರತೆ ಹೊತ್ತೊಯ್ದಿದಿದೆ ಎಂದು ಹೇಳಿದರು.