ಮಂಗಳೂರು: ಒಂದು ವರ್ಷದಿಂದ ತನ್ನ ಕುಟುಂಬದಿಂದ ದೂರಾಗಿದ್ದ ಮಗನನ್ನು ವೈಟ್ ಡೌಸ್ ಸಂಸ್ಥೆಯು ಮರಳಿ ಆತನ ಕುಟುಂಬದೊಡನೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಹಾವೇರಿಯ ಮಂಜುನಾಥ ಸುಮಾರು ಒಂದು ವರ್ಷದ ಹಿಂದೆ ಮನೆತೊರೆದಿದ್ದರು. ಕುಡಿತದ ಚಟಹೊಂದಿದ್ದ ಇವರು, ಎಲ್ಲೆಲ್ಲೊ ಅಲೆದಾಡಿ ಕೊನೆಗೊಂದು ದಿನ ಮಂಗಳೂರು ತಲುಪಿದ್ದಾರೆ. ಈ ಸಂದರ್ಭ ಅವರಿಗೆ ಅಪಘಾತವಾಗಿದ್ದು, ಯಾರೋ ಬೀದಿಪಾಲಾದವ ಎಂಬ ಕಾರಣಕ್ಕೆ ವಿಷಯ ಗಂಭೀರವಾಗಿರಲಿಲ್ಲ. ಆದರೆ, ಸೂಕ್ತ ಚಿಕಿತ್ಸೆ ಲಭಿಸದ ಕಾರಣ ಕಾಲಿನಲ್ಲಿ ಕೀವಾಗಿ, ಹುಳುಗಳಾಗಿ ನಡೆಯಲಾಗದೇ ಮಾರುಕಟ್ಟೆಯಲ್ಲಿ ಬಿದ್ದುಕೊಂಡಿದ್ದ ಇವರ ಬಗ್ಗೆ ಕಳೆದ ವರ್ಷ ಜುಲೈನಲ್ಲಿ ಯಾರೋ ವೈಟ್ ಡೌಸ್ ನಿರ್ಗತಿಕರ ಸೇವಾ ಸಂಸ್ಥೆಗೆ ಕರೆ ಮಾಡಿ ತಿಳಿಸಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ವೈಟ್ ಡೌಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕೊರಿನ್ ರಸ್ಕಿನಾ ಮಾರುಕಟ್ಟೆಗೆ ಬಂದು ಆತನನ್ನು ಕರೆದೊಯ್ದು ಶುಶ್ರೂಷೆ ಮಾಡಿದ್ದಾರೆ. ಸುಮಾರು ಎರಡು ತಿಂಗಳ ಸುದೀರ್ಘ ಚಿಕಿತ್ಸೆಯ ಬಳಿಕ ಮಂಜುನಾಥರ ಕಾಲಿನ ಗಾಯ ಸಂಪೂರ್ಣ ಗುಣವಾಗಿದೆ. ಆ ಬಳಿಕ ತಾವು ಹಾವೇರಿಯವರು ಎಂದು ತಮ್ಮ ಕುಟುಂಬದ ಬಗ್ಗೆ ಮಾಹಿತಿ ನೀಡಿರುವ ಅವರು ಮನೆಯ ದೂರವಾಣಿ ಸಂಖ್ಯೆಯನ್ನೂ ನೀಡಿ ಮತ್ತೆ ಮನೆಗೆ ತೆರಳುವ ಅಪೇಕ್ಷೆ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮನೆಗೆ ದೂರವಾಣಿ ಕರೆ ಮಾಡಿದ ಸಂಸ್ಥೆಯವರು, ಮಂಜುನಾಥರು ಈಗ ಆರೋಗ್ಯವಾಗಿದ್ದಾರೆ ಬಂದು ಕರೆದುಕೊಂಡು ಹೋಗಬಹುದು ಎಂದು ಹೇಳಿದ್ದರು. ಆದರೆ ಮನೆಯಿಂದ ಯಾರೂ ಬಂದಿರಲಿಲ್ಲ. ಮಂಜುನಾಥನ ಕುಡಿತದಿಂದ ಬೇಸತ್ತ ಕುಟುಂಬಸ್ಥರು ವೈಟ್ ಡೌಸ್ ಸಂಸ್ಥೆಯ ಕರೆಗೆ ಸ್ಪಂದನೆಯನ್ನೇ ನೀಡಿರಲಿಲ್ಲ. ಆದರೆ ಪ್ರಯತ್ನ ಕೈ ಬಿಡದ ಸಂಸ್ಥೆ, ಮನೆಯವರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕುಡಿತದ ಚಟ ಬಿಟ್ಟು ಸರಿಯಾಗಿ ಜೀವನ ನಡೆಸುತ್ತೇನೆ ಎಂದು ಹೇಳಿದ್ದರಿಂದ ಆತನ ತಂದೆ ಹಾಗೂ ಸಹೋದರ ಇಂದು ಬಂದಿದ್ದು, ಮಂಜುನಾಥರನ್ನು ಮನೆಗೆ ಕರೆದೊಯ್ದಿದ್ದಾರೆ.
ಈ ಬಗ್ಗೆ ಮಂಜುನಾಥ ಸಹೋದರ ಸಹದೇವ ಮಾತನಾಡಿ, ಮಂಜುನಾಥ ಹೆಂಡತಿ ಬಿಟ್ಟು ಹೋದ ಬೇಸರದಲ್ಲಿ ತುಂಬಾ ಕುಡಿಯಲು ಶುರು ಮಾಡಿದ್ದ. ಒಂದು ಸಲ ಮನೆಯಿಂದ ಹೊರ ಬಂದವ ಮನೆಗೆ ತಿರುಗಿ ಮತ್ತೆ ಬರಲೇ ಇಲ್ಲ. ಇನ್ನು ಮುಂದಕ್ಕೆ ಕುಡಿಯೋದಿಲ್ಲ ಎಂದು ಹೇಳಿದ್ದಾನೆ. ಸರಿಯಾದಲ್ಲಿ ನಮಗೂ ಸಂತೋಷ ಎಂದು ಹೇಳಿದರು.
ವೈಟ್ ಡೌಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕೊರಿನ್ ರಸ್ಕಿನಾ ಮಾತನಾಡಿ, ಒಂದು ವರ್ಷದ ಹಿಂದೆ ವ್ಯಕ್ತಿಯೊಬ್ಬ ಎರಡು ದಿನಗಳಿಂದ ಬಿದ್ದಿದ್ದಾನೆ ಎಂದು ಮಾರುಕಟ್ಟೆಯಿಂದ ಕರೆ ಬಂದಿತ್ತು. ಅಲ್ಲಿಗೆ ಹೋದಾಗ ತುಂಬಾ ಅಸ್ವಸ್ಥನಾಗಿ ಬಿದ್ದಿದ್ದ ಮಂಜುನಾಥನನ್ನು ಕರೆತಂದು ಶುಶ್ರೂಷೆ ಮಾಡಿದ್ದೆವು. ಆ ಬಳಿಕ ಎರಡು ತಿಂಗಳಲ್ಲಿ ಸುಧಾರಿಸಿದ್ದ ಅವನು ಮನೆಯವರ ಬಗ್ಗೆ ಮಾಹಿತಿ ನೀಡಿದ್ದ. ಇದೀಗ ಮನೆಯವರು ಆತನನ್ನು ಮನೆಗೆ ಕರೆದೊಯ್ಯಲು ಬಂದಿರೋದು ಸಂತಸ ತಂದಿದೆ ಎಂದು ಹೇಳಿದರು.
ವೈಟ್ ಡೌಸ್ ಸಂಸ್ಥೆಯು ಮಾನಸಿಕ ಅಸ್ವಸ್ಥರ, ನಿರ್ಗತಿಕರ ಸೇವೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದೆ. ನಿರ್ಗತಿಕರಿಗೆ ಆಶ್ರಯ ನೀಡಿ, ಮಾನಸಿಕ ಅಸ್ವಸ್ಥರಿಗೆ ಶುಶ್ರೂಷೆ, ಚಿಕಿತ್ಸೆ ನೀಡಿ ಉಪಚಾರ ಮಾಡುತ್ತಿದೆ. ಇಲ್ಲಿಂದ 390 ಮಂದಿ ಮಾನಸಿಕ ಅಸ್ವಸ್ಥರು, ನಿರ್ಗತಿಕರು ಗುಣಮುಖರಾಗಿ ಈಗಾಗಲೇ ಮನೆಗೆ ತೆರಳಿದ್ದು, ಮಂಜುನಾಥ ಅವರು 391ನೆಯ ವ್ಯಕ್ತಿ. ಇನ್ನೂ ಸುಮಾರು ನೂರಕ್ಕಿಂತಲೂ ಹೆಚ್ಚಿನ ಮಾನಸಿಕ ಅಸ್ವಸ್ಥರು, ನಿರಾಶ್ರಿತರು ಇಲ್ಲಿ ಆಶ್ರಯ ಪಡೆದಿದ್ದಾರೆ.