ಕಡಬ(ದಕ್ಷಿಣ ಕನ್ನಡ): ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಪಶ್ಚಿಮ ಬಂಗಾಳದ ಯುವತಿಯೊಬ್ಬಳು ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಪೊಲೀಸರಿಂದ ಬಂಧಿತನಾಗಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಯುವಕನಿಗೆ ಅಲ್ಲಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಕೋಲ್ಕತ್ತಾದ ಲೇಕ್ ಟೌನ್ ಪೊಲೀಸ್ ಸ್ಟೇಷನಲ್ಲಿ ಯುವತಿ ನೀಡಿದ ದೂರಿನನ್ವಯ, ಸೈಬರ್ ಕ್ರೈಂ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಕೋಲ್ಕತ್ತಾ ಪೊಲೀಸರು ಸೆಕ್ಷನ್ 354, 272, 500, 506, 507, 509 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ಪರಗಣದ ನ್ಯಾಯಾಲಯವು ನೂಜಿಬಾಳ್ತಿಲ ನಿವಾಸಿ ಸಂಜಯ್ ಕೃಷ್ಣನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಸಂಜಯ್ ಕೃಷ್ಣ ಬಳಸುತ್ತಿದ್ದ ಮೊಬೈಲ್ ನೆಟ್‌ವರ್ಕ್ ಅನ್ನು ಟ್ರ್ಯಾಕ್ ಮಾಡಿ ಕಡಬಕ್ಕೆ ಆಗಮಿಸಿದ ಕೋಲ್ಕತ್ತಾ ಪೊಲೀಸ್ ಅಧಿಕಾರಿ ಎಸ್.ಕೆ ತಾಜುದ್ದೀನ್ ನೇತೃತ್ವದ ಪೊಲೀಸರ ತಂಡವು ಬಸ್ನಲ್ಲಿ ಬರುತ್ತಿದ್ದ ಆರೋಪಿಯನ್ನು ಕಡಬದಲ್ಲಿ ಬಂಧಿಸಿ ಬಳಿಕ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಬಗ್ಗೆ ಕೋಲ್ಕತ್ತಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕಾರಣ ಪುತ್ತೂರು ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ಪಶ್ಚಿಮ ಬಂಗಾಳಕ್ಕೆ ಸಂಜಯ್ ಕೃಷ್ಣನನ್ನು ಕರೆದುಕೊಂಡು ಹೋದ ಪೊಲೀಸರು ಸೆ.7ರಂದು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯು ಮೇಲ್ನೋಟಕ್ಕೆ ನಿರಪರಾಧಿ ಎಂದು ವಾದಿಸುವಲ್ಲಿ ಸಂಜಯ್ ಕೃಷ್ಣ ಪರ ವಕೀಲರು ಸಫಲರಾದ ಹಿನ್ನೆಲೆಯಲ್ಲಿ ಆರೋಪಿಗೆ ಷರತ್ತುಬದ್ದ ಜಾಮೀನು ಮಂಜೂರಾಗಿದೆ.
ಘಟನೆಯ ವಿವರ: ಕೋಲ್ಕತ್ತಾ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸುಲಘ್ನ ರಾಯ್ ಚೌಧುರಿ ಎಂಬಾಕೆ ಇನ್ಸ್ಟಾಗ್ರಾಂ ಮಾಡೆಲ್ ಆಗಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಈಕೆಯ ಇನ್ಸ್ಟಾಗ್ರಾಂ ಖಾತೆಯನ್ನು ಯಾರೋ 2019ರಲ್ಲಿ ಹಾಕ್ ಮಾಡಿದ್ದರು. ಈ ಬಗ್ಗೆ ಯುವತಿಯು ಕೋಲ್ಕತ್ತಾ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು.
ಕಡಬದವರಾದ ಸಂಜಯ್ ಕೃಷ್ಣ ಅವರು ಆನ್ಲೈನ್ ಟ್ರೇಡಿಂಗ್ಗಳಾದ ಷೇರು ಮಾರುಕಟ್ಟೆ ಹಾಗೂ ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುತ್ತಿದ್ದರು. ಇದನ್ನು ಆನ್ಲೈನ್ನಲ್ಲಿ ಪ್ರಚಾರ ಮಾಡಲು ಜಾಹೀರಾತು ನೀಡುವಾಗ ಮಾಡೆಲ್ ಒಬ್ಬರ ಫೋಟೋವನ್ನು ಗೂಗಲ್ನಿಂದ ಡೌನ್ಲೋಡ್ ಮಾಡಿ ಜಾಹೀರಾತಿಗೆ ಬಳಸಿದ್ದರು ಎನ್ನಲಾಗಿದೆ. ಆ ಫೋಟೋದಲ್ಲಿರುವ ಯುವತಿ ಯಾರು ಎಂಬುದು ಸಂಜಯ್ ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ಈ ಪ್ರಕರಣದ ತನಿಖೆಯ ವೇಳೆ ಸಂಜಯ್ ಕೃಷ್ಣ ಮಾಡೆಲ್ ಫೋಟೋವನ್ನು ಜಾಹೀರಾತಿಗೆ ಬಳಸಿದ್ದರಿಂದ ಈತನೇ ಆಕೆಯ ಖಾತೆಯನ್ನು ಹ್ಯಾಕ್ ಮಾಡಿರಬಹುದು ಎಂಬ ಅನುಮಾನದ ಮೇರೆಗೆ ಸಂಜಯ್ ಕೃಷ್ಣನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದರು. ಇದೀಗ ವಿಚಾರಣೆಯ ವೇಳೆ ಸಂಜಯ್ ಕೃಷ್ಣ ಆಕೆಯ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಆದರೂ ಈ ಬಗ್ಗೆ ಉನ್ನತ ಮಟ್ಟದ ತನಿಖೆಗಳು ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್ ಕೇಸ್: ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್, 5 ಆರೋಪಿಗಳು ನ್ಯಾಯಾಂಗ ಬಂಧನಕ್ಕೆ