ಮಂಗಳೂರು: ರಾಜ್ಯ ಸರ್ಕಾರ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಲು ಒಲವು ತೋರಿಸಿದ್ದು, ನಮ್ಮ ಬೇಡಿಕೆ ಈಡೇರುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ನಾಳೆ ಆಯೋಜಿಸಲಾಗಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ನಿರ್ಧರಿಸಿ 200 ಕೋಟಿ ರೂ. ವೆಚ್ಚದಲ್ಲಿ ಸಮುದಾಯದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಅಂದಿನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದರು. ನಿಗಮ ಸ್ಥಾಪನೆಯ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ಸಿಎಂ ಯಡಿಯೂರಪ್ಪರೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಹಿಂಪಡೆಯಲಾಯಿತು. ಈ ಹಿನ್ನೆಲೆಯಲ್ಲಿ ನಾಳೆ ಪುರಭವನದ ಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಮೆಯಡಿಯಲ್ಲಿ ರಾಜ್ಯದ 24 ಜಿಲ್ಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು ಎಂದರು.
ರಾಜ್ಯ ಸರ್ಕಾರ ನನ್ನನ್ನು ಹಾಗೂ ಕ್ರೈಸ್ತ ಸಮುದಾಯದ ಇನ್ನಿತರ ಹಿರಿಯ ನಾಯಕರನ್ನು ಮಾತುಕತೆಗೆ ಆಹ್ವಾನಿಸಿ ನಿಗಮ ಸ್ಥಾಪನೆಯ ಒಲುವು ತೋರಿದೆ. ಆದ್ದರಿಂದ ನಾಳೆ ಆಯೋಜಸಲಾಗಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಹೇಳಿದರು.