ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಈ ಬಾರಿ ಜನತೆಯ ಆಶೀರ್ವಾದದಿಂದ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸರ್ಕಾರ ನಡೆಸುವ ವಿಶ್ವಾಸವಿದೆ. ಚುನಾವಣೆಯಲ್ಲಿ 123 ಸ್ಥಾನಗಳನ್ನು ನಾವು ಪಡೆಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಇಂದು (ಮಂಗಳವಾರ) ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
"ಜೆಡಿಎಸ್ ಈ ಬಾರಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಇರಿಸಿಕೊಂಡು ಚುನಾವಣೆಗೆ ಸಿದ್ದವಾಗಿದೆ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಮೂಲಕ ಹಳ್ಳಿಹಳ್ಳಿಗೂ ತೆರಳಿ ಮತದಾರರ ಮನಸ್ಸು ಅರಿತಿದ್ದಾರೆ. ಜನತೆಯ ಆಶೋತ್ತರ ಈಡೇರಿಕೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಮ್ಮ ಸರ್ಕಾರ ಬಂದರೆ ನೀಡಲಾಗುವುದು. ಜನತೆಯ ಅಭಿವೃದ್ಧಿಗೆ ಬೇಕಾದ ಪಂಚ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು" ಎಂದರು.
"ಈ ಬಾರಿ 123 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಕುಮಾರಣ್ಣ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜನತೆ ಕೂಡಾ ಹೆಚ್ಚಿನ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸ್ಪಷ್ಟ ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಭಗವಂತನ ಕೃಪೆ ಮತ್ತು ಜನತೆಯ ಆಶೀರ್ವಾದದಿಂದ ಜೆಡಿಎಸ್ ಏಕಾಂಗಿಯಾಗಿ ಸರ್ಕಾರ ನಡೆಸುವ ವಿಶ್ವಾಸ ನಮ್ಮದು" ಎಂದು ಹೇಳಿದರು.
"ನಿನ್ನೆ ನಾಮಪತ್ರ ಸಲ್ಲಿಸಿದ್ದೇನೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆದಿದ್ದೇನೆ. ರಾಷ್ಟ್ರದಲ್ಲೇ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಸ್ವಂತ ಬಲದಲ್ಲಿ ಸರ್ಕಾರ ನಡೆಸಲು ಇಷ್ಟರತನಕ ಅವಕಾಶ ದೊರಕಿಲ್ಲ. ಈ ಬಾರಿ ಈ ಅವಕಾಶವನ್ನು ಜನತೆ ಮಾಡಿಕೊಡುತ್ತಾರೆ ಎಂಬ ಆಶಾವಾದ ನಮ್ಮದು" ಎಂದರು.
"ಒಂದು ಬಾರಿ ಕಾಂಗ್ರೆಸ್ ಜೊತೆಗೆ ಒಂದು ಬಾರಿ ಬಿಜೆಪಿ ಜತೆಗೆ ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಇದರಿಂದ ಎರಡೂ ಕಡೆಗಳಿಂದಲೂ ಸಾಕಷ್ಟು ಕಹಿ ಅನುಭವಗಳನ್ನು ಅನುಭವಿಸಿದ್ದೇವೆ. ಆದ್ದರಿಂದ ಈ ಬಾರಿ ಸಮ್ಮಿಶ್ರ ಸರ್ಕಾರ ಬೇಡ ಜನತೆ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಿ ಬಹುಮತ ಬರುವಂತೆ ಮಾಡಲಿ ಎಂಬುದಾಗಿ ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ. ಜನತಾ ದಳವು ಮಂಡ್ಯದಲ್ಲಿ 7 ಕ್ಕೆ 7 ಸ್ಥಾನವನ್ನು ಮತ್ತು ರಾಮನಗರದಲ್ಲಿ ಕನಿಷ್ಟ ಪಕ್ಷ 4 ರಲ್ಲಿ ಮೂರು ಸ್ಥಾನಗಳನ್ನು ಪಡೆಯಲಿದೆ. ಮೈಸೂರಿನಲ್ಲಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ. ಈ ಹಿಂದಿನಂತೆ ಮಂಡ್ಯ, ರಾಮನಗರ ಮತ್ತು ಮೈಸೂರು ಭಾಗದಲ್ಲಿ ಅತೀ ಹೆಚ್ಚು ಸ್ಥಾನವನ್ನು ಜೆಡಿಎಸ್ ಪಡೆಯಲಿದೆ" ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ಕಿಶೋರ್ ಅರಂಪಾಡಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಮನಗರ: ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣ ವಶಕ್ಕೆ