ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಅಸಂಬದ್ಧ ಹೇಳಿಕೆಯಿಂದ ಇಡೀ ರಾಜ್ಯದಲ್ಲಿ ಜನತೆ ಅವರನ್ನು 'ಜೋಕರ್' ಎಂದು ಹೇಳುತ್ತಿದ್ದಾರೆ. ನಮ್ಮ ಜಿಲ್ಲೆಯವರನ್ನು ಜೋಕರ್ ಎಂದು ಕರೆಯುವುದು ನಮಗಿಷ್ಟವಿಲ್ಲ. ಇನ್ನಾದ್ರೂ ಅವರು ವಿವೇಕಯುತ ಹೇಳಿಕೆ ಕೊಡಲಿ ಎಂದು ಜಿಲ್ಲೆಯ ಜನತೆಯ ಪರವಾಗಿ ನಳಿನ್ ಕುಮಾರ್ ಅವರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಅವರು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಕೀಳುಮಟ್ಟದ ಮತ್ತು ವಿಭಜಿಸುವ ತಂತ್ರಗಾರಿಕೆಯ ರಾಜಕೀಯ. ರಾಷ್ಟ್ರ ಮಟ್ಟದ ಪಕ್ಷವೊಂದರ ರಾಜ್ಯಾಧ್ಯಕ್ಷರಿಗೆ ಶೋಭೆ ತರುವಂಥದ್ದಲ್ಲ ಎಂದು ಟೀಕಿಸಿದ್ರು.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ಗೆ ಸ್ಫೂರ್ತಿ ನೀಡುವ ಕೆಲಸ ಆಗಬೇಕಿತ್ತು. ಆದರೆ ಸಂಸದ ಅನಂತಕುಮಾರ್ ಹೆಗಡೆಯವರು ಪಾಕಿಸ್ತಾನಕ್ಕೆ ಹೋಗಲಿ ಎಂದರೆ, ಉಮಾನಾಥ ಕೋಟ್ಯಾನ್ Naxlalite ಎಂದು ಹೇಳುತ್ತಾರೆ. ಸಂಜೀವ ಮಠಂದೂರು ಅವರು ದೇಶದ್ರೋಹಿ ಎಂದು ಹೇಳುತ್ತಾರೆ. ಒಬ್ಬೊಬ್ಬರದ್ದು, ಒಂದೊಂದು ಹೇಳಿಕೆ. ಯಾವ ರೀತಿಯ ಆತಂಕವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ವ್ಯಕ್ತಪಡಿಸಿದ್ದರೋ, ಅದನ್ನು ಇವರು ಮಾತಿನ ಮೂಲಕವೇ ಸಾಕ್ಷಿ ಸಮೇತ ತೋರಿಸಿ ಕೊಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಯಕರ ಅಸಂಬದ್ಧ ಹೇಳಿಕೆಗಳಿಗೆ ಪಕ್ಷ ಕಡಿವಾಣ ಹಾಕಬೇಕು. ನಾಯಕರಾಗಬೇಕಾದಲ್ಲಿ ಜನರ ಕೆಲಸ ಮಾಡುವ ಮೂಲಕ ಆಗಲಿ. ಸಮಾಜದಲ್ಲಿ ಬಿರುಕು ಉಂಟುಮಾಡಿ, ಭಯದ ವಾತಾವರಣ ನಿರ್ಮಿಸುವುದು ಬೇಡ. ಇದು ಜನಪ್ರತಿನಿಧಿಗಳಿಗೆ ಶೋಭೆ ತರುವಂತದ್ದಲ್ಲ. ಹುಟ್ಟು ಮತ್ತು ಸಾವು ಯಾರ ಕೈಯಲ್ಲೂ ಇಲ್ಲ. ನಾಳೆ ನಾನು ಎಲ್ಲಿ ಹೇಗೆ ಸಾಯುತ್ತೇನೆ, ಶಾಸಕ ಸುನೀಲ್ ಕುಮಾರ್ ಎಲ್ಲಿ ಹೇಗೆ ಸಾಯುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ನಾನು ಸಾಯುವಾಗ ಹಿಂದೂ ಸೋದರರು ಬಾಯಿಗೆ ನೀರು ಹಾಕಬಹುದು. ಶಾಸಕ ಸುನಿಲ್ ಕುಮಾರ್ ಮುಸಲ್ಮಾನ ಮನೆಯ ಮುಂದೆ ಬಿದ್ದಾಗ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಯಾರಾದರೂ ಬಂದು ಬಾಯಿಗೆ ನೀರು ಹಾಕಬಹುದು. ಆದ್ದರಿಂದ ಆತ್ಮಹತ್ಯೆ, ಸಾವಿನ ವಿಚಾರ ಮಾತನಾಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.