ಮಂಗಳೂರು: ಒಂದು ವಸ್ತುವಿನ ಬಗ್ಗೆ ಸುದೀರ್ಘ ಶೋಧನೆ ನಡೆಸಿದವರನ್ನು ಋಷಿ ಎಂದು ಹಿಂದೆ ಹೇಳಲಾಗುತ್ತಿತ್ತು. ಆದರೆ ಈಗ ದೇವರನ್ನೇ ನಂಬದ, ದೇವರೇ ಇಲ್ಲ ಎನ್ನುವ ನಾಸ್ತಿಕರನ್ನು ನಮ್ಮ ಸಮಾಜ ಋಷಿ ಪರಂಪರೆಗೆ ಸೇರಿಸುತ್ತಿದೆ ಎಂದು ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದರು.
ದ.ಕ ಜಿಲ್ಲಾ ಕಸಪಾ ಮಂಗಳೂರು ಘಟಕದ ವತಿಯಿಂದ ನಗರದ ಪಣಂಬೂರು ಶ್ರೀ ನಂದನೇಶ್ವರ ದೇವಳದ ಸಭಾಂಗಣದಲ್ಲಿ ನಡೆದ ಮಂಗಳೂರು ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜವು ನಮಗೆ ಮಾತನಾಡುವ ಸ್ವಾತಂತ್ರ್ಯವನ್ನು ನೀಡಿದೆ. ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡಲ್ಲಿ ಸಮಾಜಕ್ಕೂ ಉತ್ತಮ. ಇಲ್ಲದಿದ್ದಲ್ಲಿ ಭಗವಾನ್ ತರಹದವರು ಏನೇನೋ ಮಾತನಾಡಿ ಸಾಹಿತಿಗಳ ಹೆಸರನ್ನು ಕುಲಗೆಡಿಸಿಬಿಡುತ್ತಾರೆ. ಬೇರೆ ದೇಶಗಳಲ್ಲಿ ಧರ್ಮ, ಜಾತಿಯ ವಿರುದ್ಧ ಈ ರೀತಿ ಮಾತನಾಡಿದ್ದಲ್ಲಿ ರುಂಡ ದೇಹದಿಂದ ಛೇದವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ನಮ್ಮಲ್ಲಿ ಪ್ರತಿಯೊಂದು ರಾಜ್ಯಗಳು, ಜಿಲ್ಲೆಗಳು ಅದರದ್ದೇ ಆದ ಕಲೆ, ಸಾಹಿತ್ಯ, ಸಾಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿವೆ. ಈ ಕಾರಣಕ್ಕಾಗಿಯೇ ಭಾರತದಲ್ಲಿ ಎಲ್ಲರನ್ನೂ ಒಟ್ಟಿಗೆ ಮತಾಂತರಗೊಳಿಸಲು ಪರಕೀಯರು ವಿಫಲರಾದರು. ಆದ್ದರಿಂದ ಇಂತಹ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ, ನಮ್ಮ ಜೀವನದಲ್ಲಿ ಅಳವಡಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದರು.