ಮಂಗಳೂರು: ಕೆಲವು ದಿನಗಳ ಹಿಂದೆ ಕುವೈತ್ಗೆ ಉದ್ಯೋಗ ನಿಮಿತ್ತ ತೆರಳಿದ್ದ 35 ಮಂದಿ ಭಾರತೀಯರು ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಮಾತ್ರವಲ್ಲದೇ ಊಟಕ್ಕೂ ಪರದಾಡುವ ಪರಿಸ್ಥಿತಿಗೆ ಇಲ್ಲಿನ ಕನ್ಸಲ್ಟೆಂಟ್ ಸಂಸ್ಥೆಯೇ ಕಾರಣ ಎಂದು ಆರೋಪಿಸಲಾಗಿತ್ತು. ಇದೀಗ ಈ ಸಂಸ್ಥೆ ಸ್ಪಷ್ಟನೆ ಕೊಟ್ಟಿದೆ.
ಅಸೋಸಿಯೇಷನ್ ಮ್ಯಾನ್ ಪವರ್ ಕನ್ಸಲ್ಟೆಂಟ್ ಸಂಸ್ಥೆಯ ಮಾಲಿಕ ಪ್ರಸಾದ್ ಶೆಟ್ಟಿ ಪ್ರತಿಕ್ರಿಯಿಸಿ, ಈ ಪರಿಸ್ಥಿತಿಗೆ ನಮ್ಮ ಸಂಸ್ಥೆ ಕಾರಣವಲ್ಲ. ನಮ್ಮ ಸಂಸ್ಥೆ ಕನ್ಸಲ್ಟೆಂಟ್ ಕಂಪೆನಿಯವರಿಗೆ 58 ಮಂದಿ ಉದ್ಯೋಗಾಂಕ್ಷಿಗಳಿಗೆ ಸಂಪರ್ಕಿಸುವ ಕೊಂಡಿಯಾಗಿ ಕೆಲಸ ಮಾಡಿತ್ತು. ಆದರೂ ಸಂತ್ರಸರೆಂದು ಹೇಳಲಾದ ಆ 35 ಮಂದಿಗೆ ಭಾರತಕ್ಕೆ ಮರಳಲು ಸಹಾಯ ಮಾಡಲು ತಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
ಮುಂಬೈನ ಹಾಕ್ ಕನ್ಸಲ್ಟೆಂಟ್ ಕಂಪೆನಿಗೆ ಕುವೈತ್‌ನಲ್ಲಿರುವ ಆಸ್ಪೆಕ್ಟ್ ಪೆಟ್ರೋಲಿಯಂ ಕಂಪೆನಿಯು, ಉದ್ಯೋಗಾಂಕ್ಷಿಗಳನ್ನು ಕೇಳಿದ್ದಕ್ಕೆ ದ.ಕ.ಜಿಲ್ಲೆಯ ಮಾಣಿಕ್ಯ ಅಸೋಸಿಯೇಷನ್ ಕಂಪೆನಿಯನ್ನು ಸಂಪರ್ಕಿಸಿದ್ದರು. ಹಾಕ್ ಕನ್ಸಲ್ಟೆಂಟ್ ಕಂಪೆನಿಯವರು ದ.ಕ.ಮಾತ್ರವಲ್ಲದೆ ಮುಂಬಯಿ, ಹೈದರಾಬಾದ್, ಕಲ್ಕತ್ತಾ ಹಾಗೂ ಗೋರಖ್‌ಪುರಗಳಿಂದಲೂ ಉದ್ಯೋಗಕಾಂಕ್ಷಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಮಾಣಿಕ್ಯ ಅಸೋಸಿಯೇಷನ್ ಕಂಪೆನಿ ಕಳೆದ 12 ವರ್ಷಗಳಿಂದ ಉದ್ಯೋಗಾಕಾಂಕ್ಷಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಗೆ ಕಳುಹಿಸಿಕೊಟ್ಟಿದೆ. ಈವರೆಗೆ ಯಾವುದೇ ಈ ರೀತಿಯ ಘಟನೆಗಳು ನಡೆದಿಲ್ಲ ಎಂದು ಮಾಣಿಕ್ಯ ಅಸೋಸಿಯೇಷನ್ ಕಂಪೆನಿಯ ಕಾನೂನು ಸಲಹೆಗಾರ, ನ್ಯಾಯವಾದಿ ಚಂದ್ರಹಾಸ ಕದ್ರಿ ಹೇಳಿದರು.
ನಮ್ಮ ಊರಿನ ಉದ್ಯೋಗಕಾಂಕ್ಷಿಗಳನ್ನು ನಾವು ಅವರ ದಾಖಲೆಗಳನ್ನು ತೆಗೆದುಕೊಂಡು, ಹಾಕನ್ ಸೆಂಟರ್ಗೆ ಕಳುಹಿಸಿದ್ದೇವೆ. ಅಲ್ಲಿಂದ ಅವರು ಕುವೈತ್ನ ಆ್ಯಸ್ಪೆಕ್ಟ್ ಪೆಟ್ರೋಲ್ ಕಂಪೆನಿಗೆ ದಾಖಲಿಸಲಾಗಿದೆ. ಆದ್ದರಿಂದ ನಮ್ಮ ಮುಖಾಂತರ ಮಾಡಿದ್ದನ್ನು ದಾಖಲಿಸಬಲ್ಲೆವು. ಕುವೈತ್ ತಲುಪಿದ ನಂತರ ಮೂರು ತಿಂಗಳು ಪ್ರೊಬೆಷನರಿ ಪೀರಿಯಡ್ ಇರುತ್ತದೆ. ಆದ್ದರಿಂದ ಮೂರು ತಿಂಗಳು ಉಚಿತ ಊಟ ಹಾಗೂ ವಸತಿ ಜೊತೆಗೆ ಸಂಬಳ ಸೌಲಭ್ಯವಿತ್ತು. ನಮ್ಮ ಕಡೆಯಿಂದ ನಾವು ಇದನ್ನೆಲ್ಲಾ ಮಾಡಿದ್ದೇವೆ. ಆದರೆ ಆ ರಾಷ್ಟ್ರದ ನಿಯಮಕ್ಕೆ ಬದ್ಧರಾಗಿ ಅವರು ಕೆಲಸ ಮಾಡಬೇಕು ಎಂದು ನ್ಯಾಯವಾದಿ ಚಂದ್ರಹಾಸ ಕದ್ರಿ ಹೇಳಿದರು.
ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ. ನಾವು ನಮ್ಮ ದಾಖಲೆಗಳನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸರಿಗೆ ತೋರಿಸಿ, ಎರಡು ಗಂಟೆ ಚರ್ಚೆ ಮಾಡಿದ್ದೇವೆ. ಅವರ ಪ್ರಕಾರ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ನಮ್ಮ ಎಲ್ಲಾ ದಾಖಲೆಗಳನ್ನು ಒದಗಿಸಿಕೊಟ್ಟಿದ್ದೇವೆ ಎಂದು ಅವರು ಹೇಳಿದರು.