ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದ ಕುರಿತು ಪತ್ರ ಬರೆದಿದ್ದು, ಇದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಗ್ಗಡೆಯವರು ಪ್ರತೀ ವರ್ಷ ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಶಾಲಾ-ಕಾಲೇಜುಗಳ ಶೈಕ್ಷಣಿಕ ಪ್ರವಾಸ ಏರ್ಪಡಿಸುವುದರಿಂದ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ದೇವರ ದರ್ಶನ, ಊಟ, ವಸತಿ ಹಾಗೂ ವೀಕ್ಷಣೆ ಬಗ್ಗೆ ಒತ್ತಡ ಮತ್ತು ಸಮಸ್ಯೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳು ಯಾವುದೇ ಒತ್ತಡ ಇಲ್ಲದೆ ಸಾವಧಾನವಾಗಿ ಆಸಕ್ತಿಯಿಂದ ದೇವಾಲಯಗಳು ಹಾಗೂ ಪ್ರೇಕ್ಷಣೀಯ ತಾಣಗಳನ್ನು ವೀಕ್ಷಿಸಿದಾಗ ಜ್ಞಾನಾರ್ಜನೆಯೊಂದಿಗೆ ಶೈಕ್ಷಣಿಕ ಪ್ರವಾಸ ಸಾರ್ಥಕವಾಗುತ್ತದೆ ಎಂದು ಪತ್ರ ಬರೆದಿದ್ದರು.
ಈ ಸಲಹೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಣ ಸಚಿವರು, ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ತಕ್ಷಣ ಸೂಕ್ತ ಆದೇಶ ನೀಡುವುದಾಗಿ ಹೆಗ್ಗಡೆಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.