ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಪಡೆಸಬೇಕಾದ ರಸ್ತೆಯನ್ನು ಬಿಟ್ಟು ಚೆನ್ನಾಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಇದಕ್ಕೆ ಗ್ರಾಮ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿ ಪೇಟೆಯ ಮಾನಡ್ಕ ಎಂಬಲ್ಲಿಂದ ದೇರಾಜೆ, ಬಲ್ಯ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಈ ಭಾಗದ ಜನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 2019 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಭಾಗದ ಜನರ ನಿಯೋಗ ಮುಖ್ಯಮಂತ್ರಿಯ ಬಳಿಗೆ ಹೋಗಿ ಈ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಆದೇಶದೊಂದಿಗೆ ಊರಿಗೆ ಮರಳಿದ್ದರು.
ಆದರೆ ಇದೀಗ ಈ ರಸ್ತೆಯ ಬದಲಾಗಿ ಲೋಕೋಪಯೋಗಿ ಇಲಾಖೆ ಇಚ್ಲಂಪಾಡಿ ಸಮೀಪದ ಕೈಪಿನಡ್ಕ ಎನ್ನುವ ಪ್ರದೇಶದಿಂದ ದೇರಾಜೆ, ಬಲ್ಯ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಹೊರಟಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮಸ್ಥರ ಅಸಹಾಯಕತೆ:
ಲೋಕೋಪಯೋಗಿ ಇಲಾಖೆ ಪ್ರಸ್ತುತ ಅಭಿವೃದ್ಧಿ ಪಡಿಸಲು ಮುಂದಾಗಿರುವ ಕೈಪಿನಡ್ಕ, ದೇರಾಜೆ ರಸ್ತೆಗಾಗಿ ಸಾಕಷ್ಟು ಜಮೀನನ್ನು ಸ್ಥಳೀಯರು ಬಿಟ್ಟುಕೊಟ್ಟಿದ್ದರು. ಇದೀಗ ಇದ್ದ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕೃಷಿಕರಿಗೆ ರಸ್ತೆ ಅಭಿವೃದ್ಧಿಯ ವಿಚಾರ ಗರಬಡಿದಂತಾಗಿದೆ. ಈಗಾಗಲೇ ಸಾಕಷ್ಟು ಭೂಮಿಯನ್ನು ರಸ್ತೆಗಾಗಿ ಬಿಟ್ಟುಕೊಡಲಾಗಿದ್ದು, ಇನ್ನು ಕೊಡಲು ತಮ್ಮ ಬಳಿ ಏನೂ ಇಲ್ಲ ಎಂದು ಗ್ರಾಮಸ್ಥರು ಅಸಹಾಯಕತೆಯನ್ನು ಹೊರ ಹಾಕಿದ್ದಾರೆ.
ಸ್ಥಳೀಯರ ವಾದ:
ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆದಲ್ಲಿ ಲೋಕೋಪಯೋಗಿ ರಸ್ತೆಯ ನಿಯಮದ ಪ್ರಕಾರ 12 ಮೀಟರ್ ರಸ್ತೆಯು ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಸಾಕಷ್ಟು ಕೃಷಿ ಭೂಮಿ ನಾಶವಾಗುತ್ತದೆ ಎಂಬ ಆತಂಕ ಸ್ಥಳೀಯ ನಿವಾಸಿಗಳದ್ದಾಗಿದೆ. ಆದರೆ ಮಾನಡ್ಕ ಮೂಲಕ ಹಾದು ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಸ್ಥಳೀಯರ ಎಲ್ಲಾ ಸಹಕಾರವೂ ಇದ್ದು, ಇಲ್ಲಿ ಕೃಷಿಭೂಮಿಯೂ ಹೆಚ್ಚಾಗಿಲ್ಲ, ಅಭಿವೃದ್ಧಿಗಾಗಿ ಮನೆ ಮಠವನ್ನೂ ಕಳೆದುಕೊಂಡು ಅನಾಥರಾಗುವ ಸ್ಥಿತಿಯೂ ನಿರ್ಮಾಣಗೊಳ್ಳುವುದಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ.
ಗ್ರಾಮಸ್ಥರ ಆರೋಪ:
ರಸ್ತೆಯನ್ನು ಲೋಕೋಪಯೋಗಿ ಇಲಾಖೆ ರಸ್ತೆಯನ್ನಾಗಿ ಪರಿವರ್ತಿಸುತ್ತಿರುವ ಕಾರಣ ಕಾಲ ಕಾಲಕ್ಕೆ ರಸ್ತೆ ದುರಸ್ತಿಯೂ ನಡೆಯುವ ಕಾರಣಕ್ಕಾಗಿ ಮಾನಡ್ಕ ಮೂಲಕ ಹಾದುಹೋಗುವ ರಸ್ತೆಯನ್ನೇ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಈ ರಸ್ತೆಯ ಅಭಿವೃದ್ಧಿಗೆ ಸ್ಥಳೀಯರ ವಿರೋಧವೂ ಈವರೆಗೂ ಸ್ಥಳೀಯ ಗ್ರಾಪಂಗೂ ಬಂದಿಲ್ಲ. ಆದರೆ ಕೆಲವು ಕಾಣದ ಕೈಗಳು ಈ ರಸ್ತೆಯನ್ನು ಬಿಟ್ಟು, ಇನ್ನೊಂದು ರಸ್ತೆಯನ್ನು ಅಭಿವೃದ್ಧಿಪಡಿಸಲು ಹೊರಟಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಪ್ರತಿಭಟನೆಗೆ ಸಿದ್ಧತೆ:
ಸರ್ಕಾರದ ಈ ತೀರ್ಮಾನಕ್ಕೆ ಕೈಪಿನಡ್ಕ ಭಾಗದ ಜನರ ವಿರೋಧವಿದ್ದು, ಯಾವುದೇ ಕಾರಣಕ್ಕೂ ಕೈಪಿನಡ್ಕ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆ ಹಾಗೂ ಕಾನೂನು ಹೋರಾಟಕ್ಕೆ ಇಳಿಯಲು ಗ್ರಾಮಸ್ಥರ ತೀರ್ಮಾನ ಮಾಡಿದ್ದು, ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.