ಆಲಂಕಾರು (ದಕ್ಷಿಣ ಕನ್ನಡ) : ಕಡಬ ತಾಲೂಕು ಕೊಯಿಲ ಗ್ರಾಮದಲ್ಲಿರುವ ಪಶುಸಂಗೋಪನಾ ಕೇಂದ್ರದ ಜಾಗದಲ್ಲಿ ಹಾದು ಹೋಗುವ ಮುಖ್ಯ ರಸ್ತೆಯ ಅಭಿವೃದ್ದಿಗೆ ಶಾಸಕ ಎಸ್. ಅಂಗಾರ ಏಳು ತಿಂಗಳ ಹಿಂದೆ ಗುದ್ದಲಿ ಪೂಜೆ ಮಾಡಿದ್ದರು. ಆದರೆ, ಇದುವರೆಗೂ ಕಾಮಗಾರಿ ಪ್ರಾರಂಭವಾಗದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಪಶುಸಂಗೋಪನಾ ಇಲಾಖೆಯ ಜಾಗದಲ್ಲಿಈ ರಸ್ತೆ ಹಾದು ಹೋಗಿರುವುದರಿಂದ ಅಭಿವೃದ್ದಿಗೆ ಕಾನೂನು ತೊಡಕು ಇತ್ತು. ಪ್ರಸ್ತುತ ಸಚಿವರಾಗಿರುವ ಸುಳ್ಯ ಶಾಸಕ ಎಸ್. ಅಂಗಾರ ಅವರ ಪರಿಶ್ರಮದಿಂದ ಆ ತೊಡಕುಗಳು ನಿವಾರಣೆಯಾಗಿತ್ತು. ಬಳಿಕ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಮಾರು 1 ಕಿ.ಮೀ ರಸ್ತೆಗೆ ಮರು ಡಾಂಬರಿಕರಣ ಮಾಡುವ ಮೂಲಕ ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿತ್ತು.
ಓದಿ : ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗಳು.. ರಸ್ತೆ, ಸೇತುವೆಯಿಲ್ಲದೇ ಸಿರಿಬಾಗಿಲು ಜನರಿಗೆ ನರಕಯಾತನೆ
ಕಳೆದ ಬೇಸಿಗೆಯಲ್ಲಿ ಆರಂಭವಾಗಬೇಕಿದ್ದ ರಸ್ತೆ ಕಾಮಗಾರಿ, ಬೇಸಿಗೆ ಕಳೆದು ಮಳೆಗಾಲ ಅರ್ಧ ಮುಗಿದರೂ ಇನ್ನೂ ಪ್ರಾರಂಭವಾಗಿಲ್ಲ. ಉಪ್ಪಿನಂಗಡಿ – ಕಡಬ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೊಕುಲನಗರದಿಂದ ಪಶುಸಂಗೋಪನಾ ಇಲಾಖೆಯ ಜಾಗದ ಮುಖಾಂತರ ಹಾದು ಹೋಗುವ ಮುಖ್ಯ ರಸ್ತೆ ಇದಾಗಿದೆ. ಕಡಬ ತಾಲೂಕಿನ ಕೊನೆಮಜಲು, ಪಲ್ಲಡ್ಕ, ಪಟ್ಟೆ, ಕಾಯರಕಟ್ಟ, ನಿಲಮೆ, ಅತೂರು ಬೈಲು, ಕೊಯಿಲ ಶಾಲೆ, ಪೊಸಲಕ್ಕೆ, ಸುದೆಂಗಳ, ಕಲಾಯಿ, ಕಲ್ಕಾಡಿ, ಪುತ್ಯೆ, ನೂಜಿ ಭಾಗದ ಜನ ಈ ರಸ್ತೆಯನ್ನೇ ಆಶ್ರಯಿಸಿದ್ದಾರೆ.
ಮತದಾನ ಬಹಿಷ್ಕಾರ: ಪ್ರಮುಖ ರಸ್ತೆಯಾಗಿದ್ದರೂ, ಡಾಂಬಾರು ಕಿತ್ತು ಹೋಗಿತ್ತು. ರಸ್ತೆ ದುರಸ್ತಿ ಮಾಡುವಂತೆ ಜನ ಹಲವು ಸಮಯದಿಂದ ಆಗ್ರಹಿಸುತ್ತಿದ್ದರು. ಜನರ ಬಹುಕಾಲದ ಬೇಡಿಕೆಯಂತೆ ಕೊನೆಗೂ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರು ಸಂತಸಗೊಂಡಿದ್ದರು. ಆದರೆ, ಗುದ್ದಲಿ ಪೂಜೆ ಬಳಿಕ ಕಾಮಗಾರಿ ಪ್ರಾರಂಭವಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ಕಾರಣಕ್ಕೆ ಮುಂಬರುವ ತಾ.ಪಂ ಚುನಾವಣೆ ಬಹಿಷ್ಕರಿಸಲು ಜನ ನಿರ್ಧರಿಸಿದ್ದಾರೆ. ಕೊಯಿಲ ಪ್ರವೇಶ ದ್ವಾರದ ಬಳಿ ಚುನಾವಣೆ ಬಹಿಷ್ಕರಿಸಿರುವುದಾಗಿ ಬ್ಯಾನರ್ ಅಳವಡಿಸಲಾಗಿದೆ. "ಈ ರಸ್ತೆ ಅಭಿವೃದ್ದಿಯ ವಿಚಾರ ಕೇವಲ ಆಶ್ವಾಸನೆಯಾಗಿಯೇ ಉಳಿದಿದೆ. ಹೀಗಾಗಿ, ಈ ಭಾಗದ ಜನತೆ ಸ್ವಯಂಪ್ರೇರಿತರಾಗಿ ಮುಂಬರುವ ಜಿಲ್ಲೆ, ತಾಲೂಕು ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆ" ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ.
ಬ್ಯಾನರ್ ಮಾತ್ರವಲ್ಲದೇ, ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ಮಾಡಲಾಗ್ತಿದೆ. ಈ ಬಾರಿ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿನಿಧಿಗಳಿಗೆ ಜನ ಎಚ್ಚರಿಕೆ ಕೊಟ್ಟಿದ್ದಾರೆ.