ಮಂಗಳೂರು: ವಿಧಾನ ಪರಿಷತ್ನಲ್ಲಿ ಇತ್ತೀಚೆಗೆ ನಡೆದ ಘಟನೆ ಬಗ್ಗೆ ವಿಧಾನ ಪರಿಷತ್ ಸದಸ್ಯನಾಗಿ ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ನಲ್ಲಿ ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ವೈಯಕ್ತಿಕ ಪ್ರತಿಷ್ಠೆ, ಪಕ್ಷದ ಹಿತಾಸಕ್ತಿಗಿಂತಲೂ ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಬದ್ಧತೆ, ಮೌಲ್ಯಗಳು ಪ್ರಮುಖ ಸ್ಥಾನ ಪಡೆಯುತ್ತವೆ. ವಿಧಾನ ಪರಿಷತ್ ಎಂಬುದು ಚಿಂತಕರ ಚಾವಡಿ. ವಿಧಾನಸಭೆಗೆ ಮಾರ್ಗದರ್ಶನ ನೀಡುವ, ಒಳ್ಳೆಯ ಸಂಗತಿಗಳನ್ನು ಕೊಡುವ ಪರಂಪರೆ ಇದೆ. ಆದರೆ ಮೊನ್ನೆ ನಡೆದ ಘಟನೆ ಕೆಟ್ಟ ಕನಸು ಎಂಬ ರೀತಿಯಲ್ಲಿ ಜನರು ತಮ್ಮ ಮನಸಿನಿಂದ ಇದನ್ನು ಬಿಡಬೇಕು ಎಂದರು.
ಓದಿ...'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'.. ಪದ್ಮಾಸನದಲ್ಲಿ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜಿದ ಶಿಕ್ಷಕ
ಆದರೆ ಈ ಘಟನೆಗೆ ನಿಯಾಮವಳಿಯನ್ನು ಪಾಲನೆ ಮಾಡದಿರುವುದು ಕಾರಣವಾಗಿದೆ. ಸಭಾಪತಿಗಳ ಮೇಲೆ ಅವಿಶ್ವಾಸ ಕೊಟ್ಟ ತಕ್ಷಣ ಅದನ್ನು ಮಾಡಬೇಕಿತ್ತು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ರಾಜೀನಾಮೆ ಕೊಡುವ ಇಂಗಿತವಿದ್ದರೂ ಕಾಂಗ್ರೆಸ್ ಪಕ್ಷದ ಹತಾಸೆ, ಕೋಪದಿಂದ ಈಗಿನ ಸರ್ಕಾರದ ವಿರುದ್ಧ ವಿರೋಧಕ್ಕಾಗಿ ಸಭಾಪತಿ ಸ್ಥಾನದ ಗೌರವವನ್ನು ಪಕ್ಷ ರಾಜಕೀಯಕ್ಕೆ ಉಪಯೋಗಿಸಿಕೊಂಡಿತು ಎಂದು ಆರೋಪಿಸಿದರು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ತಮ್ಮ ರಾಜಕೀಯ ಜೀವನದ ಮುಸ್ಸಂಜೆಯಲ್ಲಿ ಈ ರೀತಿಯ ಕೀರ್ತಿ ಪಡೆಯುವ ಬದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.