ಮಂಗಳೂರು: ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಕೊರೊನಾ ವಾರಿಯರ್ಸ್ ಪೊಲೀಸ್ ಕುಟುಂಬಗಳೊಂದಿಗೆ ಸಂವಾದ ನಡೆಸುವ ಮೂಲಕ ವಿನೂತನ ಪ್ರಯೋಗ ನಡೆಸಿದ್ದಾರೆ.
ದಿನವೂ ಓರ್ವ ಪೊಲೀಸ್ ಸಿಬ್ಬಂದಿ ಕೋವಿಡ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿರೋದಕ್ಕೆ ಕೊರೊನಾ ವಾರಿಯರ್ ಎಂದು ಪ್ರಶಂಸೆ ಮಾಡುತ್ತಿದ್ದ ಪೊಲೀಸ್ ಆಯುಕ್ತರು, ಇದೀಗ ಕೊರೊನಾ ವಾರಿಯರ್ಗಳ ಕುಟುಂಬಸ್ಥರಿಗೆ ವಿಡಿಯೋ ಕರೆ ಮಾಡಿ ಅವರ ಕುಟುಂಬದ ವ್ಯಕ್ತಿಯ ಸಾಧನೆಯ ಬಗ್ಗೆ ವಿವರಿಸುವ ವಿನೂತನ ಕಾರ್ಯ ನಡೆಸುತ್ತಿದ್ದಾರೆ.
ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳವರು ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ಕೊರೊನಾ ವಾರಿಯರ್ಗಳಾಗಿಯೂ ತಮ್ಮ ಶಕ್ತಿ ಮೀರಿ ಶ್ರಮ ವಹಿಸುತ್ತಿದ್ದಾರೆ. ಈ ಸಂದರ್ಭ ಅವರ ಕುಟುಂಬಸ್ಥರು ಸೋಂಕು ಹರಡುವ ಬಗ್ಗೆ ಭಯಭೀತರಾಗುತ್ತಿದ್ದಾರೆ. ಆದ್ದರಿಂದ ಅವರ ಕುಟುಂಬ ಸದಸ್ಯರೊಂದಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರಿಗೆ ಧೈರ್ಯ ತುಂಬಿದರು.
ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕು ಹರಡದಂತೆ ಹೋರಾಟ ನಡೆಸುತ್ತಿದ್ದಾರೆ. ಸಮಾಜದ ಪರವಾಗಿ ಪೊಲೀಸ್ ಇಲಾಖೆ ಶಕ್ತಿ ಮೀರಿ ಕೆಲಸ ಮಾಡುತ್ತಿದೆ ಎಂದು ಕುಟುಂಬಸ್ಥರು ಹೆಮ್ಮೆ ಪಡುವಂತೆ ಮಾತನಾಡಿದರು. ಅಲ್ಲದೆ ಅವರ ಕುಟುಂಬದ ವ್ಯಕ್ತಿಯ ಉತ್ತಮ ಕಾರ್ಯದ ಬಗ್ಗೆ ಕೊಂಡಾಡಿದರು. ಅಲ್ಲದೆ ಇನ್ನೂ ಹೆಚ್ಚು ಶ್ರದ್ಧೆ ವಹಿಸಿ ಕೆಲಸ ಮಾಡಲು ಹೆಚ್ಚಿನ ಪ್ರೇರಣೆ ನೀಡಬೇಕೆಂದು ಹೇಳಿದರು.