ಮಂಗಳೂರು: ದೇಶಿಯ ಮತ್ತು ಅಂತಾರಾಷ್ಟ್ರೀಯ ಸೇವೆಗಳನ್ನು ನೀಡುತ್ತಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ವಿಮಾನಯಾನದ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದೆ ಆರ್ಥಿಕ ವ್ಯವಸ್ಥೆ ಮೇಲೆ ಹೊಡೆತ ಬೀರಿರುವ ಜೊತೆಗೆ ವಿಮಾನವನ್ನೆ ಅವಲಂಬಿಸುತ್ತಿದ್ದ ಪ್ರಯಾಣಿಕರಲ್ಲಿ ನಿರಾಶೆಗೆ ಕಾರಣವಾಗಿದೆ.
ಕರಾವಳಿಯ ಜನರು ಗಲ್ಫ್ ರಾಷ್ಟ್ರಗಳಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣವನ್ನು ಅವಲಂಬಿಸುತ್ತಿದ್ದರು. ಆದರೆ ಲಾಕ್ಡೌನ್ ಬಳಿಕ ಅಂತರಾಷ್ಟ್ರೀಯ ವಿಮಾನ ಸೇವೆ ಸ್ಥಗಿತವಾಗಿದ್ದು, ಗಲ್ಫ್ ದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದವರನ್ನು ಕರೆತರುವ ಕಾರ್ಯ ಮಾತ್ರ ಆಗಿದೆ.
ದೇಶಿಯ ಸೇವೆಯು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಮಂಗಳೂರು ವಿಮಾನ ನಿಲ್ದಾಣದಿಂದ ನವದೆಹಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್ ಚೆನ್ನೈಗೆ ಇದ್ದ ವಿಮಾನ ಸೇವೆಯಲ್ಲಿ ಲಾಕ್ಡೌನ್ ತೆರವಿನ ಬಳಿಕ ಮಂಗಳೂರಿನಿಂದ ಮುಂಬಯಿ ಮತ್ತು ಬೆಂಗಳೂರಿಗೆ ಮಾತ್ರ ಸೇವೆ ಆರಂಭವಾಗಿದೆ. ಏರ್ ಇಂಡಿಯಾ ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮುಂಬಯಿನಿಂದ 4.20 ಕ್ಕೆ ಮಂಗಳೂರು ತಲುಪಿ, 5.20 ಕ್ಕೆ ತೆರಳಲಿದೆ.
ಇಂಡಿಗೋ ಸಂಸ್ಥೆಯ ವಿಮಾನವು ಮುಂಬಯಿನಿಂದ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರ ಬೆಳಿಗ್ಗೆ 11 ಗಂಟೆಗೆ ಬಂದು 11.40 ಕ್ಕೆ ಹೊರಡಲಿದೆ. ಇಂಡಿಗೋ ಸಂಸ್ಥೆ ವಿಮಾನ ಬೆಂಗಳೂರಿಗೆ ಮಂಗಳವಾರ ಹೊರತುಪಡಿಸಿ ಪ್ರತಿದಿನ ಪ್ರಯಾಣ ಬೆಳೆಸುತ್ತದೆ. ಮಧ್ಯಾಹ್ನ 1 ಗಂಟೆಗೆ ಬರುವ ವಿಮಾನ 1.40 ಕ್ಕೆ ತೆರಳಲಿದೆ. ಸ್ಪೈಸ್ ಜೆಟ್ ವಿಮಾನ ಪ್ರತಿದಿನ ಬೆಂಗಳೂರಿಗೆ ಸಂಚರಿಸಲಿದ್ದು, 10 ಗಂಟೆಗೆ ಬೆಂಗಳೂರಿನಿಂದ ಬರುವ ವಿಮಾನ 10.20 ಕ್ಕೆ ಮಂಗಳೂರಿನಿಂದ ತೆರಳುತ್ತದೆ. ಡೆಲ್ಲಿ, ಹೈದರಾಬಾದ್ ಮತ್ತು ಚೆನ್ನೈ ನಡುವೆ ವಿಮಾನ ಯಾನ ಸೇವೆ ಇನ್ನೂ ಆರಂಭವಾಗಿಲ್ಲ.
ವಿಮಾನಗಳ ಆಗಮನ ಮತ್ತು ನಿರ್ಗಮನದಿಂದ ಚಟುವಟಿಕೆಗಳ ಕೇಂದ್ರವಾಗಿದ್ದ ಮಂಗಳೂರು, ಸಂಪೂರ್ಣ ಸ್ಥಗಿತ ಮತ್ತು ದೇಶೀಯ ವಿಮಾನಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕಾರಣ ಪ್ರಯಾಣಿಕರ ಸಂಕಷ್ಟಕ್ಕೆ ಕಾರಣವಾಗಿದೆ. ಎಲ್ಲವು ಸಹಜಸ್ಥಿತಿಗೆ ಬಂದಿರುವ ಈ ಸಂದರ್ಭದಲ್ಲಿ ವಿಮಾನ ಯಾನ ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.