ಮಂಗಳೂರು : ಉಜಿರೆಯ ಎಂಟು ವರ್ಷದ ಬಾಲಕ ಅನುಭವ್ನನ್ನು ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಅಪಹರಣಕ್ಕೆ ಸುಪಾರಿ ನೀಡಿದವನ ಶೋಧ ಕಾರ್ಯ ಮುಂದುವರಿದಿದೆ ಎಂದು ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 17 ರಂದು ಉಜಿರೆಯಲ್ಲಿವ ನಿವೃತ್ತ ನೌಕಾ ದಳದ ಉದ್ಯೋಗಿ ಎಕೆ ಶಿವನ್ ಅವರ ಮನೆಯ ಬಳಿಯಿಂದ ಅವರ ಮೊಮ್ಮಗನನ್ನು ಬಿಳಿ ಬಣ್ಣದ ಕಾರಿನಲ್ಲಿ ಅಪಹರಿಸಲಾಗಿತ್ತು. ಇಂದು ಮುಂಜಾನೆ ಕೋಲಾರದಲ್ಲಿ ಪೊಲೀಸರು ಬಾಲಕನನ್ನು ರಕ್ಷಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ ಎಂದರು.
ಇದನ್ನೂ ಓದಿ : 3 ದಿನಗಳ ಬಳಿಕ ಮಡಿಲು ಸೇರಿದ ಮಗ: ಕರಾವಳಿಯಿಂದ ಬಯಲು ಸೀಮೆವರೆಗಿನ ಸೀಕ್ರೇಟ್ ಹೀಗಿತ್ತು..!
ಅಪಹರಣ ಮಾಡಿದ ಮಂಡ್ಯ ಜಿಲ್ಲೆಯ ದೇವಲಕೆರೆ ಗ್ರಾಮದ ರಂಜಿತ್ (22), ಮಂಡ್ಯ ಜಿಲ್ಲೆಯ ಕೋಡಿಕೆರೆ ಗ್ರಾಮದ ಹನುಮಂತು (21), ಮೈಸೂರು ಜಿಲ್ಲೆಯ ವಡಂತ ಹಳ್ಳಿ ಗ್ರಾಮದ ಗಂಗಾಧರ (25), ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮಲ್ (22) ಮತ್ತು ಅಪಹರಿಸಿದ ಆರೋಪಿಗಳಿಗೆ ಆಶ್ರಯ ನೀಡಿದ ಕೋಲಾರ ಜಿಲ್ಲೆಯ ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ (24) ಮತ್ತು ಮಹೇಶ್ (26) ಬಂಧಿತರು ಎಂದು ತಿಳಿಸಿದರು.
ಸುಪಾರಿ ನೀಡಿದವನ ಬಂಧನಕ್ಕೆ ಮುಂದುವರಿದ ಶೋಧ:
ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಕಿಡ್ನಾಪ್ ಮಾಡಲು ಸುಪಾರಿ ನೀಡಿದ ವ್ಯಕ್ತಿಯ ಬಂಧನಕ್ಕಾಗಿ ಶೋಧ ಮುಂದುವರಿದಿದೆ. ಈತ ಕಿಡ್ನಾಪ್ ಮಾಡಿದ ಆರೋಪಿಗಳಿಗೆ ಏಳು ಲಕ್ಷ ರೂ. ನೀಡುವುದಾಗಿ ಹೇಳಿ ಬಾಲಕನ ಅಪಹರಣ ಮಾಡಿಸಿದ್ದಾನೆ. ಆತ ಆರೋಪಿಗಳಿಗೆ ಒಂದು ದಿನದಲ್ಲಿ ಹಣ ಕೈಸೇರುವುದಾಗಿ ತಿಳಿಸಿದ್ದಾನೆ. ಕಿಡ್ನಾಪ್ ಮಾಡಿದ ಬಳಿಕ ಈತ ಬಾಲಕನ ತಾಯಿಗೆ ಫೋನ್ ಮಾಡಿ ಮತ್ತು ಬಾಲಕನ ತಂದೆಯ ವಾಟ್ಸ್ಆ್ಯಪ್ ಮೂಲಕ 100 ಬಿಟ್-ಕಾಯಿನ್(17 ಕೋಟಿ) ನಲ್ಲಿ ಹಣದ ಬೇಡಿಕೆ ಇರಿಸಿದ್ದ. ಆದರೆ, ಬಾಲಕನ ತಂದೆ ತನ್ನಲ್ಲಿ ಬಿಟ್- ಕಾಯಿನ್ ಇಲ್ಲ ಎಂದು ಹೇಳಿದಾಗ 60 ಬಿಟ್ ಕಾಯಿನ್ (10 ಕೋಟಿ) ಡಿಮ್ಯಾಂಡ್ ಮಾಡಿದ್ದನು.
ಇತ್ತ ಬಾಲಕನನ್ನು ಅಪಹರಿಸಿದ ಆರೋಪಿಗಳು, ರಾಜ್ಯದ ವಿವಿಧ ಜಿಲ್ಲೆಗಳಿಗೆ ತಿರುಗಿ ಕೊನೆಗೆ ಕೋಲಾರದ ಮಂಜುನಾಥ ಮೂಲಕ ಮಹೇಶ್ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ. ಇವರ ಇರುವಿಕೆಯನ್ನು ರಾತ್ರಿಯೆ ಪತ್ತೆ ಹಚ್ಚಿದ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸಿ ಬಾಲಕನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಪಾರಿ ನೀಡಿದ ವ್ಯಕ್ತಿ ಮಧ್ಯಪ್ರದೇಶದ ನಂಬರ್ನಿಂದ ಮಾತನಾಡುತ್ತಿದ್ದು ಈತನ ಶೋಧ ಮುಂದುವರಿದಿದೆ ಎಂದರು.
ಇದನ್ನೂ ಓದಿ : ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ; ಬಿಗಿದಪ್ಪಿ ಮುದ್ದಾಡಿದ ಪೋಷಕರು
ಸುಪಾರಿ ನೀಡಿದ ವ್ಯಕ್ತಿ ಬಾಲಕನ ತಂದೆಗೆ ಈ ಹಿಂದೆ ನೆಟ್ವರ್ಕ್ ಬ್ಯುಸಿನೆಸ್ನಲ್ಲಿ ಪರಿಚಿತನಾಗಿದ್ದ. ಹಿಂದೆ ಬಾಲಕನ ತಂದೆ ಬಿಟ್ ಕಾಯಿನ್ನಲ್ಲಿ ವ್ಯವಹಾರ ಮಾಡುತ್ತಿದ್ದು, ಇದು ಸುಪಾರಿ ನೀಡಿದ ಆರೋಪಿಗೆ ತಿಳಿದಿತ್ತು. ಬಿಟ್ ಕಾಯಿನ್ನಲ್ಲಿ ಹಣಕಾಸು ವಹಿವಾಟು ನಡೆಸಿದರೆ ಅದನ್ನು ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ಪ್ರಮುಖ ಆರೋಪಿ ಬಿಟ್ ಕಾಯಿನ್ನಲ್ಲಿ ಡಿಮ್ಯಾಂಡ್ ಮಾಡಿದ್ದರು. ಅಪರಾಧ ಪ್ರಕರಣದಲ್ಲಿ ಈ ರೀತಿಯ ಬೇಡಿಕೆಯಿಡುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದರು.
ಬಾಲಕನನ್ನು ಚೆನ್ನಾಗಿ ನೋಡಿಕೊಂಡಿದ್ದ ಕಿಡ್ನಾರ್ಸ್:
ಬಾಲಕನನ್ನು ಅಪಹರಣ ಮಾಡಿದ ಬಳಿಕ ಈ ಆರೋಪಿಗಳು ಬಾಲಕನಿಗೆ ಯಾವುದೇ ತೊಂದರೆ ಮಾಡಿಲ್ಲ. ಆರೋಪಿಗಳು ಬೆಂಗಳೂರಿನ ಒಂದು ಮನೆಯಲ್ಲಿ ಹದಿನೈದು ನಿಮಿಷ ತಂಗಿದ್ದು, ನಿನ್ನೆ ರಾತ್ರಿ ಕೋಲಾರದಲ್ಲಿಯೂ ತಂಗಿದ್ದರು. ಆದರೆ, ಅಪಹರಣಕ್ಕೊಳಗಾದ ಬಾಲಕ ತನಗೆ ತೊಂದರೆಯಾದ ಬಗ್ಗೆ ಬಾಯ್ಬಿಟ್ಟಿಲ್ಲ. ಇಂದು ಬಾಲಕನನ್ನು ಕೋಲಾರದಲ್ಲಿ ತಾಯಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಒಂದೊಂದು ತಂಡ ಮೂಡಿಗೆರೆ, ಶ್ರವಣಬೆಳಗೊಳ, ಮಧುಗಿರಿ, ಬೆಂಗಳೂರಿನಲ್ಲಿ ಶೋಧ ನಡೆಸಿದರೆ ಒಂದು ತಂಡ ಸಿಸಿಟಿವಿಗಳ ಶೋಧದಲ್ಲಿ ನಿರತವಾಗಿತ್ತು. ಆರೋಪಿಗಳ ಬಂಧನಕ್ಕೆ ಕೋಲಾರ ಎಸ್ಪಿಯವರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.