ಮಂಗಳೂರು : ರಾಜ್ಯ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಚರ್ಚೆ ಮಾಡುವ ಉದ್ದೇಶವಿದ್ದಲ್ಲಿ ಎಂಟು ದಿವಸಕ್ಕೆ ಸೀಮಿತವಾಗಿರಿಸಿದ ವಿಧಾನಸಭೆಯ ಅಧಿವೇಶನವನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸಲಿ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ಅಧಿವೇಶನ ವಿಸ್ತರಿಸಲು ಅಥವಾ ಹೊಸದಾಗಿ ಅನುಷ್ಠಾನ ಮಾಡಲು ಉದ್ದೇಶಿಸಿರುವ ಬಿಲ್‌ಗಳನ್ನು ಕೈಬಿಡಲಿ ಎಂದ್ರು. ರಾಜ್ಯದಲ್ಲಿ ಜನಸಾಮಾನ್ಯರ ಪರ ಸರ್ಕಾರ ಇಲ್ಲ. ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಬಿಜೆಪಿ ಸರ್ಕಾರ ಇದೆ ಎಂದರು.
ರಾಜ್ಯ ಸರ್ಕಾರ ಕಾಟಾಚಾರಕ್ಕೆ ಸೆ.21ರಿಂದ 8 ದಿವಸದ ವಿಧಾನಸಭೆಯ ಅಧಿವೇಶನ ಕರೆದಿದ್ದಾರೆ. ತುಮಕೂರು ಎಂಎಲ್‌ಎ ಮೃತಪಟ್ಟ ಹಿನ್ನೆಲೆ ಸಂಪ್ರದಾಯ ಪ್ರಕಾರ ಒಂದು ದಿನ ಅಧಿವೇಶನ ಇರೋದಿಲ್ಲ. ಉಳಿದಂತೆ ಏಳು ದಿನಗಳಲ್ಲಿ ಕೋವಿಡ್ ಸಮಸ್ಯೆ, ಕಾನೂನು ಸುವ್ಯವಸ್ಥೆ ಸಂಬಂಧಿಸಿದ ವಿಚಾರಗಳು, ಎಂಎಲ್ಎ ಮನೆಗೆ ಬೆಂಕಿ ಕೊಟ್ಟ ಪ್ರಕರಣ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಜನರಿಗೆ ದೊರಕದ ಪರಿಹಾರ, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯನ್ನು ತೆಗೆದು ಹಾಕಿರುವುದು, ನೂತನ ಶಿಕ್ಷಣ ನೀತಿ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಇದರ ಜೊತೆಯಲ್ಲಿ ಇನ್ನೂ 28 ಬಿಲ್‌ಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಅವರಿಗೆ ಬೇಕಾಗಿರುವ ಬಿಲ್ ಪಾಸ್ ಮಾಡಲು ಅಧಿವೇಶನ ಕರೆದಿದ್ದಾರೆಯೇ ಹೊರತು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಹುಡುಕುವ ಯಾವುದೇ ಇರಾದೆ ಇಲ್ಲ ಎಂದು ಕಿಡಿಕಾರಿದರು.
ಯಾವುದೇ ಬಿಲ್‌ನ ಚರ್ಚೆ ಮಾಡಿ ಅನುಷ್ಠಾನ ಮಾಡುವುದು ಸಾಧ್ಯವಿಲ್ಲ. ಒಂದು ಬಿಲ್ ಪಾಸ್ ಮಾಡಲು ಅರ್ಧಗಂಟೆ ಚರ್ಚೆ ಮಾಡಲು ಸಮಯವಿಲ್ಲ. ಆದ್ದರಿಂದ ಸರ್ಕಾರ ಅಧಿವೇಶನದ ಸಮಯವನ್ನು ವಿಸ್ತರಿಸಲಿ ಅಥವಾ ಹೊಸದಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ 28 ಬಿಲ್‌ಗಳನ್ನು ಕೈಬಿಡಲಿ ಎಂದು ಖಾದರ್ ಆಗ್ರಹಿಸಿದರು.