ಬಂಟ್ವಾಳ (ದ.ಕ.): ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಬಂಟ್ವಾಳದ ಯುವಕರಿಬ್ಬರು ಸ್ಥಳೀಯ ಅಂಗಡಿಗಳಿಂದ ನೇರವಾಗಿ ಆಟೋ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಅಗತ್ಯವಸ್ತುಗಳನ್ನು ತಲುಪಿಸಲು ಅನುಕೂಲವಾಗುವಂತಹ ಸಾಫ್ಟ್ವೇರ್ ರಚಿಸಿದ್ದಾರೆ.
ಈಗಾಗಲೇ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಸ ಎಸೆಯುವವರನ್ನು ಕ್ಯಾಮೆರಾ ಮೂಲಕ ಪತ್ತೆ ಹಚ್ಚುವ ತಂತ್ರಜ್ಞಾನದ ಡೆಮೋ ಮಾಡಿ ಗಮನ ಸೆಳೆದಿದ್ದ, ಸಂದೀಪ್ ಬಂಟ್ವಾಳ್ ಮತ್ತು ಕೃಷ್ಣ ಕುಮಾರ ಸೋಮಯಾಜಿ ಎಂಬ ಯುವಕರೇ ಈ ಸಾಫ್ಟ್ವೇರ್ ರಚಿಸಿದ್ದಾರೆ.
ಕೊರೊನಾದಿಂದಾಗಿ ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯವಾಗಿರುವ ಕಾರಣ, ಯವಕರಿಬ್ಬರು (smartbantwal.com) ಎಂಬ ಆನ್ಲೈನ್ ಶಾಪಿಂಗ್ ಮೂಲಕ ಸಾರ್ವಜನಿಕರಿಗೆ ನೆರವಾಗುತ್ತಿದ್ದಾರೆ.
ಬಂಟ್ವಾಳದ ಕೆಲ ಅಂಗಡಿ, ಮೆಡಿಕಲ್ ಶಾಪ್ ಜೊತೆ ಇವರು ಕೈಜೋಡಿಸಿದ್ದು, ಈ ಅಂಗಡಿಗಳ ಮೊಬೈಲ್ ನಂಬರ್ ಅನ್ನು ಸ್ಮಾರ್ಟ್ ಬಂಟ್ವಾಳ ಆನ್ಲೈನ್ ನಲ್ಲಿ ನಮೂದಿಸಲಾಗಿರುತ್ತದೆ. ಅದಕ್ಕೆ ಗ್ರಾಹಕರು ಚೀಟಿಯನ್ನು ಕಳುಹಿಸಿ ಎಲ್ಲಿಗೆ ಒದಗಿಸಬೇಕು ಎಂದು ನಮೂದಿಸಿದರೆ, ಮರುದಿನ ಅಂಗಡಿ, ಮೆಡಿಕಲ್ ನಿಂದ ಆಟೊದಲ್ಲಿ ಬೇಕಾದ ವಸ್ತುಗಳು ಬರುತ್ತವೆ. ವಸ್ತುವನ್ನು ಆಟೊದಲ್ಲಿ ತಲುಪಿಸುವ ದರ 35 ರೂ ಆಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಈ ಕಾರ್ಯ ನಡೆಯುತ್ತಿದೆ.
ನಗರದ ಕೆಂಪುಗುಡ್ಡೆ, ಲೊರೆಟ್ಟೊ, ಗಾಣದಪಡ್ಪು, ಕೆಳಗಿನಪೇಟೆ, ಬೈಪಾಸ್, ಜಕ್ರಿಬೆಟ್ಟು, ಅಗ್ರಾರ್, ಹಳೆಗೇಟು, ಕರೆಂಕಿ, ಅಲ್ಲಿಪಾದೆ ಮಾರ್ಗದವರಿಗೆ ಸದ್ಯಕ್ಕೆ ಈ ಶಾಪಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನೇಕ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸನ್ನಿವೇಶ ಇರುವ ಕಾರಣ, ಈ ವ್ಯವಸ್ಥೆಯನ್ನು ನಾವು ಆರಂಭಿಸಿರುವುದಾಗಿ ಸಂದೀಪ್ ತಿಳಿಸಿದ್ದಾರೆ.