ಉಳ್ಳಾಲ (ದಕ್ಷಿಣ ಕನ್ನಡ): ಉಳ್ಳಾಲದ ಸೋಮೇಶ್ವರ ಸಮುದ್ರ ತೀರಕ್ಕೆ ವಿಹಾರಕ್ಕೆಂದು ತೆರಳಿದ್ದ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಮುದ್ರಪಾಲಾಗಿರುವ ಘಟನೆ ಶನಿವಾರ ಮಧ್ಯಾಹ್ನದ ವೇಳೆ ಸಂಭವಿಸಿದೆ. ಇಬ್ಬರು ಬಾಲಕರಿಗಾಗಿ ಸ್ಥಳೀಯ ಈಜುಗಾರರು ಹಾಗೂ ಉಳ್ಳಾಲ ಠಾಣಾ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯಶ್ವಿತ್ ಮತ್ತು ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್ ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದವರು. ಇಬ್ಬರು ಸಮೀಪದ ಸೋಮೇಶ್ವರ ಪರಿಜ್ಞಾನ ಪಿಯುಸಿ ಕಾಲೇಜಿನ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ.
ಕಾಲೇಜು ಮುಗಿಸಿ ಮಧ್ಯಾಹ್ನದ ನಂತರ ಸಮುದ್ರ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ಸಮುದ್ರದ ಅಲೆಗಳ ನಡುವೆ ಸಿಲುಕಿದರೆ, ಇನ್ನೋರ್ವ ವಿದ್ಯಾರ್ಥಿ ಆತನನ್ನು ರಕ್ಷಿಸಲು ಮುಂದಾಗುತ್ತಿದ್ದಂತೆ ಇಬ್ಬರು ಅಲೆಗಳ ನಡುವೆ ಸಿಲುಕಿ ಕಣ್ಮರೆಯಾಗಿದ್ದಾರೆ. ಸ್ಥಳಕ್ಕೆ ಉಳ್ಳಾಲ ಠಾಣಾಧಿಕಾರಿ ಹೆಚ್ ಎನ್ ಬಾಲಕೃಷ್ಣ ಭೇಟಿ ನೀಡಿದ್ದು, ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರತ್ಯೇಕ ಪ್ರಕರಣ; ಸೆಪ್ಟೆಂಬರ್ ತಿಂಗಳಲ್ಲಿ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿತ್ತು. ಸಮುದ್ರ ವಿಹಾರಕ್ಕೆಂದು ಬಂದಿದ್ದ ಐವರು ವೈದ್ಯರಲ್ಲಿ ವೈದ್ಯರೊಬ್ಬರು ಸಮುದ್ರಪಾಲಾದ ಘಟನೆ ಸೋಮೇಶ್ವರ ರುದ್ರಪಾದೆ ಸಮೀಪ ತಡರಾತ್ರಿ ಸಂಭವಿಸಿತ್ತು. ಮರುದಿನ ಬೆಳಗ್ಗೆ ಮೃತದೇಹ ಪತ್ತೆಯಾಗಿತ್ತು. ನಗರದ ಎ ಜೆ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದ ಡಾ. ಆಶೀಕ್ ಗೌಡ (30) ಮೃತ ವೈದ್ಯ.
ಸೆಪ್ಟೆಂಬರ್ 3ರಂದು ತಡರಾತ್ರಿ ಸೋಮೇಶ್ವರಕ್ಕೆ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ. ಪ್ರದೀಶ್ ಮೂವರು ಇಂಟರ್ನ್ಶಿಪ್ನಲ್ಲಿ ಕಾರ್ಯ ನಡೆಸುತ್ತಿರುವ ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಸೋಮೇಶ್ವರಕ್ಕೆ ಬಂದಿದ್ದರು. ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ. ಪ್ರದೀಶ್ ಕಲ್ಲಿನಿಂದ ಸಮುದ್ರಕ್ಕೆ ಜಾರಿ ಬಿದ್ದಿದ್ದರು. ನೀರಿನಲ್ಲಿ ನಿಂತು ರಕ್ಷಣೆಗೆ ಕೂಗುತ್ತಿದ್ದ ಸಂದರ್ಭ ಡಾ.ಆಶೀಕ್ ಗೌಡ ಇಣುಕುವ ಕ್ಷಣದಲ್ಲಿ ಕಾಲುಜಾರಿ ಬಿದ್ದು ಸಮುದ್ರಪಾಲಾಗಿದ್ದರು. ಡಾ. ಪ್ರದೀಶ್ ಸಣ್ಣ ಕಲ್ಲು ಹಿಡಿದು ಸಮುದ್ರದಿಂದ ಮೇಲಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದರು. ಮರುದಿನ ಅಲ್ಲೇ ಸಮುದ್ರ ತೀರದಲ್ಲಿ ಡಾ. ಆಶೀಕ್ಗೌಡರ ಮೃತದೇಹ ಪತ್ತೆಯಾಗಿತ್ತು.
ಎಚ್ಚರಿಕೆ- ಅಲೆಗಳ ಅಬ್ಬರವಿದ್ದಾಗ ಸಮುದ್ರಕ್ಕಿಳಿಬೇಡಿ; ಸೋಮೇಶ್ವರ ಸಮುದ್ರ ತೀರ ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದುಕೊಂಡಿದೆ. ಈ ಕುರಿತು ಸ್ಥಳದಲ್ಲಿರುವ ಬಂಡೆಗಳಲ್ಲಿ ಹಾಗೂ ಇಲಾಖೆ ವತಿಯಿಂದ ನಾಮಫಲಕಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಕೋರಲಾಗಿದೆ. ಆದರೂ ಸ್ಥಳದಲ್ಲಿ ವಿಹಾರಕ್ಕೆಂದು ಬರುವ ವಿದ್ಯಾರ್ಥಿಗಳು, ಪ್ರವಾಸಿಗರು ಹೋಂಗಾಡ್೯ಗಳ ಮತ್ತು ನಾಮಫಲಕಗಳನ್ನು ಗಮನಿಸಿಯೂ ಸಮುದ್ರಕ್ಕೆ ಇಳಿದು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ಥಳಕ್ಕೆ ಬರುವವರು ಮುಂಜಾಗ್ರತಾ ವಹಿಸಿ ವಿಹರಿಸುವಂತೆ ಉಳ್ಳಾಲ ಠಾಣಾಧಿಕಾರಿ ಹೆಚ್ ಎನ್ ಬಾಲಕೃಷ್ಣ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ನದಿಗೆ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ