ಮಂಗಳೂರು: ಇತ್ತೀಚೆಗೆ ನಗರದ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ 50ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಕೊರೊನಾ ಸೋಂಕಿತರಾಗಿದ್ದು ಸಂಪೂರ್ಣ ಕಾಲೇಜು ಸೀಲ್ ಡೌನ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಂಗಳೂರಿನ ಮತ್ತೆರಡು ಕಾಲೇಜುಗಳ ವಿದ್ಯಾರ್ಥಿಗಳು ಸೋಂಕಿತರಾಗಿದ್ದು, ಆ ಎರಡೂ ಕಾಲೇಜುಗಳನ್ನು ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನೋಟಿಸ್ ಜಾರಿ ಮಾಡಿದ್ದಾರೆ.
ನಗರದ ಶ್ರೀದೇವಿ ಡೆಂಟಲ್ ಕಾಲೇಜಿನ 51 ಹಾಗೂ ಬಾಸ್ಕೋಸ್ ಕಾಲೇಜಿನ 16 ಮಂದಿಗೆ ಸೋಂಕು ತಗುಲಿದೆ. ಪರಿಣಾಮ ಎರಡೂ ಕಾಲೇಜುಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ. ನಗರದ ಹೆಚ್ಚಿನ ಎಲ್ಲಾ ಮೆಡಿಕಲ್ ಹಾಗೂ ಇನ್ನಿತರ ಕಾಲೇಜುಗಳಲ್ಲಿ ಕೇರಳದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿಗಳಲ್ಲಿಯೇ ಸೋಂಕು ಲಕ್ಷಣಗಳು ಕಂಡು ಬರುತ್ತಿವೆ. ಇದು ಜಿಲ್ಲಾಡಳಿತ ಹಾಗೂ ಕಾಲೇಜು ಆಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ.