ನೆಲ್ಯಾಡಿ(ದಕ್ಷಿಣ ಕನ್ನಡ): ಕಾನ್ವೆಂಟ್‌ಗೆ ಅಕ್ರಮವಾಗಿ ಪ್ರವೇಶ ಮಾಡಿ ಸಿಸ್ಟರ್ಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಪೇರಡ್ಕ ನಿವಾಸಿಗಳಾದ ಸದ್ದಾಂ ಹಾಗೂ ಇಸ್ಮಾಯಿಲ್ ಬಂಧಿತ ಆರೋಪಿಗಳು. ಇವರು ನೆಲ್ಯಾಡಿಯಲ್ಲಿರುವ ಬೆಥನಿ ಕಾನ್ವೆಂಟ್‌ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಈ ಬಗ್ಗೆ ಅಲ್ಲಿನ ಸಿಸ್ಟರ್ ಓರ್ವರು, ನೀವು ಇಲ್ಲಿಗೆ ಯಾಕೆ ಬಂದಿದ್ದೀರಿ? ಎಂದು ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿಗಳು, ಇದನ್ನು ಕೇಳಲು ನೀನು ಯಾರು?, ನಾವು ಯಾವಾಗ ಬೇಕಾದರು ಬರುತ್ತೇವೆ ಎಂದು ಅವಾಚ್ಯವಾಗಿ ಬೈದಿದ್ದಾರೆ ಎನ್ನಲಾಗ್ತಿದೆ.
ಇದೇ ವೇಳೆ ಪಕ್ಕದ ಚರ್ಚ್‌ನಲ್ಲಿ ಸಭೆ ನಡೆಯುತ್ತಿತ್ತು. ಇವರ ಬೊಬ್ಬೆ ಕೇಳಿ ಸೋನು ಜಾರ್ಜ್ ಎಂಬವರು ಕಾನ್ವೆಂಟ್‌ಗೆ ಬಂದಾಗ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ನಿಮ್ಮಿಂದ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಈ ವಿಚಾರವನ್ನು ಯಾರಿಗಾದರೂ ಹೇಳಿದ್ರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಹುಡುಗ ಹುಡುಗಿ ಮೇಲೆ ಹಲ್ಲೆ ಆರೋಪ: ಪ್ರಕರಣದ ದಾಖಲು
ಘಟನೆ ಕುರಿತಂತೆ ಸಿಸ್ಟರ್ ಪರಿಮಳ ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಕಲಂ: 447, 504, 506 ಹಾಗೂ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.