ಮಂಗಳೂರು: ಮಾಜಿ ಸಚಿವ ಯು.ಟಿ. ಖಾದರ್ ಅವರ ಕಾರನ್ನು ಯುವಕನೊಬ್ಬ ಹಿಂಬಾಲಿಸಿಕೊಂಡ ಬಂದ ಪ್ರಕರಣ ಇದೀಗ ಟ್ವಿಸ್ಟ್ ಪಡೆದುಕೊಂಡಿದೆ.
ಎರಡು ದಿನದ ಹಿಂದೆ ಮಾಜಿ ಸಚಿವ ಯು.ಟಿ. ಖಾದರ್ ಅವರು ಮಂಗಳೂರಿನ ದೇರಳಕಟ್ಟೆಯಿಂದ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ವೇಳೆ ಯುವಕನೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿರುವ ಬಗ್ಗೆ ಖಾದರ್ ಅವರ ಎಸ್ಕಾರ್ಟ್ ಮಾಡುತ್ತಿದ್ದ ಪೊಲೀಸರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದರಂತೆ ಕದ್ರಿ ಪೊಲೀಸರು ನಂತೂರು ಬಳಿ ಬೈಕ್ ಸವಾರನನ್ನು ಅಡ್ಡಗಟ್ಟಿದ ವೇಳೆ ಪರಾರಿಯಾಗಿದ್ದನು. ಬಳಿಕ ಆತನನ್ನು ಹುಡುಕಿ ವಿಚಾರಣೆ ನಡೆಸಿದಾಗ ಇದು ಹೆಡ್ಪೋನ್ನಿಂದ ಆದ ಎಡವಟ್ಟು ಎಂದು ತಿಳಿದುಬಂದಿದೆ. ಬೋಳೂರಿನ ಅನೀಸ್ ಪೂಜಾರಿ ಎಂಬ ವ್ಯಕ್ತಿಯೇ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದು ಹೆಡ್ಪೋನ್ ಹಾಕಿಕೊಂಡಿದ್ದೇ ಈ ಘಟನೆಗೆ ಕಾರಣ ಎಂದು ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ : ಯುಟಿ ಖಾದರ್ ಕಾರು ಬೆಂಬತ್ತಿ ಬಂದ ಬೈಕ್ ಸವಾರ ಪರಾರಿ, ಪೊಲೀಸರಿಂದ ಶೋಧ ಕಾರ್ಯ
ಹೆಡ್ಪೋನ್ ಹಾಕಿ ಬೈಕ್ ಓಡಿಸುತ್ತಿದ್ದ ಅನೀಸ್ ಪೂಜಾರಿಗೆ ಮಾಜಿ ಸಚಿವ ಖಾದರ್ ಕಾರನ್ನು ಚೇಸ್ ಮಾಡುತ್ತಿದ್ದೇನೆ ಎಂಬ ಪರಿಜ್ಞಾನವೇ ಇರಲಿಲ್ಲವಂತೆ. ನಂತೂರಿನಲ್ಲಿ ಪೊಲೀಸರು ನಿಲ್ಲಿಸಿದಾಗ ಹೆಡ್ಪೋನ್ ಹಾಕಿದ್ದಕ್ಕೆ ದಂಡ ವಸೂಲಿ ಮಾಡುತ್ತಾರೆಂದು ತಿಳಿದು ಪರಾರಿಯಾಗಿರುವುದಾಗಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನಿಂದ ದಂಡ ವಸೂಲಿ ಮಾಡಿ ಬಿಡುಗಡೆ ಮಾಡಿದ್ದಾರೆ.