ಮಂಗಳೂರು (ದಕ್ಷಿಣ ಕನ್ನಡ) : ನಗರದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತುಳುಲಿಪಿಯಲ್ಲಿ ನಾಮಫಲಕ ಅಳವಡಿಸಲಾಯಿತು. ದೇವಳದ ಎರಡನೇ ಗೋಪುರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಲ್ಯ ಎಂದು ತುಳುಲಿಪಿಯಲ್ಲಿ ನಾಮಫಲಕದ ಮೇಲೆ ಬರೆಯಲಾಗಿದೆ.
ಈ ಬಗ್ಗೆ ದೇವಳದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಈ ಮೂಲಕ ತುಳುಲಿಪಿ ಮತ್ತೆ ಜನಮಾನಸದಲ್ಲಿ ಮೂಡಲಿ ಎಂದು ಆಶಿಸಿ ಕಟೀಲು ಶ್ರೀಕ್ಷೇತ್ರದಲ್ಲಿ ತುಳುಲಿಪಿಯಲ್ಲಿ ನಾಮಫಲಕ ಅಳವಡಿಸಲಾಗಿದೆ. ಕೆಲ ಭಾಷೆಗಳಿಗೆ ಲಿಪಿ ಇಲ್ಲ. ಭಾರತದ ಅತ್ಯಂತ ಪ್ರಾಚೀನ ಭಾಷೆ ಸಂಸ್ಕೃತಕ್ಕೂ ಲಿಪಿ ಇಲ್ಲ.
ಕಾಶ್ಮೀರದಲ್ಲಿ ಅದನ್ನು ಬ್ರಾಹ್ಮಿ ಲಿಪಿಯಲ್ಲಿ ಬರೆದರೆ, ಉತ್ತರಭಾರತದಲ್ಲಿ ದೇವನಾಗರಿಯಲ್ಲಿ ಬರೆಯುತ್ತಾರೆ. ಅದೇ ರೀತಿ ಕರಾವಳಿಯಲ್ಲಿ ತುಳು ಲಿಪಿಯಲ್ಲಿ ಬರೆಯಲಾಗುತ್ತದೆ ಎಂದರು. ತುಳುಲಿಪಿಯು ಸಂಸ್ಕೃತಕ್ಕಾಗಿಯೇ ಹುಟ್ಟಿದ್ದೆಂದರೆ ತಪ್ಪಿಲ್ಲ. ಓಂಕಾರ ಅನ್ನೋದು ಅತ್ಯಂತ ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದೇ ಇದೆ.
ಓಂಕಾರ ಅನ್ನೋ ಪದ ಸಂಸ್ಕೃತ ಲಿಪಿಯದ್ದೆಂದು ಹೆಚ್ಚಿನವರು ತಿಳಿದಿದ್ದಾರೆ. ಆದರೆ, ಸಂಸ್ಕೃತಕ್ಕೆ ಲಿಪಿ ಇಲ್ಲ. ಈಗ ನಾವು ಬಳಸುತ್ತಿರುವ ಓಂಕಾರದ ಓಂ ಅನ್ನೋ ಬರಹ ತುಳು ಲಿಪಿಯಲ್ಲಿ ಬರೆದಿರೋದು. ಯಾಕೆಂದರೆ, ತುಳು ಅತ್ಯಂತ ಪ್ರಾಚೀನ ಭಾಷೆ ಎಂದು ಹೇಳಿದರು.