ಮಂಗಳೂರು: ತುಳು ಸಿನಿಮಾರಂಗ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿದೆ. ತುಳು ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವ ಮುನ್ನ, ಟಿವಿಯಲ್ಲಿ ಬಿತ್ತರಿಸಿ, ತುಳು ಸಿನಿಮಾ ನಿರ್ಮಾಪಕರು ಮತ್ತು ಪ್ರೇಕ್ಷಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿಟ್ಟುಕೊಂಡು 'ನಮ್ಮ ಕುಡ್ಲ ಟಾಕೀಸ್ ಎಂಬ ಹೊಸ ಪ್ರಯತ್ನ ಆರಂಭಿಸಲಾಗಿದೆ.
ನಮ್ಮ ಕುಡ್ಲ ಟಾಕೀಸ್ ಎಂಬುದು ಖಾಸಗಿ ವಾಹಿನಿಯೊಂದರ ಹೊಸ ಪ್ರಯತ್ನವಾಗಿದೆ. ಸಿನಿಮಾ ನಿರ್ಮಾಣ ಮಾಡಿ ಸೆನ್ಸಾರ್ ಆದ ಬಳಿಕ, ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುನ್ನ, ನಮ್ಮ ಕುಡ್ಲ ಟಾಕೀಸ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಟಿವಿ ವಾಹಿನಿಯ ಸ್ಕ್ರೀನಿಂಗ್ ತಂಡ ಸಿನಿಮಾ ವೀಕ್ಷಿಸಿ, ಟಿವಿಯಲ್ಲಿ ಪ್ರಸಾರ ಮಾಡಲು ಆಯ್ಕೆ ಮಾಡುತ್ತದೆ. ಆಯ್ಕೆಯಾದ ಸಿನಿಮಾವನ್ನು ಒಂದು ತಿಂಗಳ ಕಾಲ ಕೇಬಲ್ ಮೂಲಕ ಟಿವಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ನಮ್ಮ ಕುಡ್ಲ ಟಾಕೀಸ್ ಎಂಬುವುದು ಸೆಟ್ ಆಪ್ ಬಾಕ್ಸ್ ಪ್ಲಾಟ್ ಫಾರಂನಲ್ಲಿ ಸಿನಿಮಾ ನೀಡುವ ಚಾನೆಲ್. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಬಲ್ ನಿರ್ವಹಣೆ ಮಾಡುತ್ತಿರುವ ಎರಡು ಸಂಸ್ಥೆಗಳ ಮೂಲಕ, ಸಿನಿಮಾ ಪ್ರದರ್ಶನವಾಗಲಿದೆ. ತಿಂಗಳ ಕೊನೆಯ ಭಾನುವಾರಂದು ಮೂರು ಪ್ರದರ್ಶನ ನೀಡಲಾಗುತ್ತದೆ. ಕೇಬಲ್ ಗ್ರಾಹಕರು ಟಿವಿಯಲ್ಲಿ ಸಿನಿಮಾ ನೋಡಬೇಕಿದ್ದರೆ, ತಿಂಗಳಿಗೆ 120 ರೂ ಪಾವತಿಸಬೇಕು. ಹೋಮ್ ಥಿಯೇಟರ್ಗೆ ಹೆಚ್ಡಿ ಫಾರ್ಮೆಟ್ನಲ್ಲಿ ಬೇಕಿದ್ದರೆ ತಿಂಗಳಿಗೆ 160 ರೂ. ಪಾವತಿಸಬೇಕು. ಹೀಗೆ, ಹಣ ಪಾವತಿಸಿದ ಗ್ರಾಹಕರಿಗೆ ತಿಂಗಳ ಪ್ರತಿ ಆದಿತ್ಯವಾರ ಒಂದು ಸಿನಿಮಾ ನೋಡುವ ಅವಕಾಶ ಸಿಗಲಿದೆ. ಇದರಿಂದ, ಕುಟುಂಬ ಸಮೇತ ಹೊಸ ಸಿನಿಮಾವನ್ನು 120 ರೂ. ಗೆ ನೋಡುವ ಅವಕಾಶ ಪ್ರೇಕ್ಷಕರಿಗೆ ಲಭ್ಯವಾಗಲಿದೆ.
ಸಿನಿಮಾ ನಿರ್ಮಾಪಕರಿಗೆ ಏನು ಲಾಭ..?
ತುಳುವಿನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗುವ ಸಿನಿಮಾಗಳಲ್ಲ. ಕೇವಲ 50 ಲಕ್ಷದ ಆಜುಬಾಜಿನಲ್ಲಿ ತುಳು ಸಿನಿಮಾಗಳು ನಿರ್ಮಾಣವಾಗುತ್ತದೆ. ನಿರ್ಮಾಪಕರು ಸಿನಿಮಾಕ್ಕೆ ಹಾಕಿದ ದುಡ್ಡು ಮತ್ತೆ ಕೈ ಸೇರುತ್ತದೆ ಎಂಬ ನಂಬಿಕೆಯಿಲ್ಲ. ಆದರೆ, ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಸಿನಿಮಾಗಳಿಗೆ ವಾಹಿನಿ ಸೂಕ್ತ ಹಣ ನೀಡುತ್ತದೆ. ಒಂದು ತಿಂಗಳು ಟಿವಿಯಲ್ಲಿ ಪ್ರಸಾರ ಮಾಡಿದ ಬಳಿಕ ಸಿನಿಮಾ ಮಂದಿರಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ವೇಳೆ, ಸಿನಿಮಾ ಮಂದಿರದಲ್ಲಿಯೇ ಹೋಗಿ ಸಿನಿಮಾ ನೋಡಬೇಕೆನ್ನುವವರು ನೋಡಬಹುದು. ಇದರಿಂದ ನಿರ್ಮಾಪಕರಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 2 ಲಕ್ಷ ಕೇಬಲ್ ಗ್ರಾಹಕರಿದ್ದು, ಇದರಲ್ಲಿ 50 ಸಾವಿರ ಗ್ರಾಹಕರು ನಮ್ಮ ಕುಡ್ಲ ಟಾಕೀಸ್ ಪಡೆದುಕೊಳ್ಳಬಹುದೆಂಬುದು ಲೆಕ್ಕಾಚಾರ. ಇದು ಸಾಧ್ಯವಾದರೆ ತುಳು ಚಿತ್ರರಂಗದಲ್ಲಿ ತುಳು ಸಿನಿಮಾಗಳಿಗೆ ಈವರೆಗೆ ಇರುವ ಪ್ರೇಕ್ಷಕರ ಸಂಖ್ಯೆಗಿಂತಲೂ ಜಾಸ್ತಿ ಪ್ರೇಕ್ಷಕರು ಇಲ್ಲಿ ಸಿಗಲಿದ್ದಾರೆ. ತುಳು ಸಿನಿಮಾಗಳನ್ನು ಕುಟುಂಬ ಸಮೇತ ನೋಡಲು ಸಿನಿಮಾ ಮಂದಿರಕ್ಕೆ ಹೋಗಿ ಬರಲು ದುಬಾರಿ ಖರ್ಚು ಮಾಡಬೇಕಿರುವುದರಿಂದ, ತುಳು ಸಿನಿಮಾ ವೀಕ್ಷಣೆ ಮಾಡದ ಹೊಸ ಪ್ರೇಕ್ಷಕರು ಇಲ್ಲಿ ಸಿಗುವ ಸಾಧ್ಯತೆ ಇದೆ. ಈ ಕಾರಣದಿಂದ ನಮ್ಮ ಕುಡ್ಲ ಟಾಕೀಸ್ ಸಿನಿಮಾ ನಿರ್ಮಾಪಕರು ಮತ್ತು ಸಿನಿಮಾ ವೀಕ್ಷಕರಿಗೆ ಅನುಕೂಲಕರ ವೇದಿಕೆ ಸೃಷ್ಟಿಸುವ ನಿರೀಕ್ಷೆಯಿದೆ.