ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಕ್ಯಾನ್ಸರ್ ರೋಗಿಗಳು ಒಂದೇ ಕಡೆಯಲ್ಲಿ ಪೂರ್ಣಪ್ರಮಾಣದ ಚಿಕಿತ್ಸೆಯನ್ನು ಪಡೆಯಲು ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ. ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಜುಲೇಕಾ ಯೆನಪೋಯದಲ್ಲಿ ಶುರುವಾಗುತ್ತಿರುವ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ 25 ಕೋಟಿ ರೂ ವೆಚ್ಚದ ಟ್ರೂಭೀಮ್ ಎಂಬ ಯಂತ್ರವನ್ನು ಅಳವಡಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ರೇಡಿಯೋಥೆರಪಿ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ.
36 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಇಲ್ಲಿ ಎರಡು ರೇಡಿಯೋಥೆರಪಿ ಬಂಕರ್, ಒಂದು ಬ್ರಾಕಿಥೆರಪಿ ಬಂಕರ್, ಟ್ರೂಭೀಮ್ ರೇಡಿಯೋ ಥೆರಪಿ ಯಂತ್ರಗಳಿವೆ. ಟ್ರೂ ಭೀಮ್ ಯಂತ್ರದ ಮೂಲಕ ಕ್ಯಾನ್ಸರ್ ರೋಗಿಗಳಿಗೆ ವಿಕಿರಣ ಚಿಕಿತ್ಸೆಯನ್ನು ಕಾನ್ಸರ್‌ಪೀಡಿತ ಪ್ರದೇಶಕ್ಕೆ ನಿಖರವಾಗಿ ನೀಡಲು ಸಾಧ್ಯವಾಗಲಿದೆ. ಸಾಧಾರಣವಾಗಿ ವಿಕಿರಣ ಚಿಕಿತ್ಸೆ ನೀಡುವಾಗ ಕ್ಯಾನ್ಸರ್‌ಬಾಧಿತ ನಿರ್ದಿಷ್ಟ ಜಾಗದ ಸುತ್ತಲೂ ವಿಕಿರಣದ ಪ್ರಭಾವ ಬೀಳಲಿದೆ. ಇದು ಕ್ಯಾನ್ಸರ್ ರೋಗಿಯ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಈ ಟ್ರೂಭೀಮ್ ಯಂತ್ರದ ಮೂಲಕ ವಿಕಿರಣ ಚಿಕಿತ್ಸೆಯನ್ನು ಕ್ಯಾನ್ಸರ್ ಬಾಧಿತ ಪ್ರದೇಶಕ್ಕೆ ಮಾತ್ರ ನೀಡುವುದರಿಂದ ದುಷ್ಪರಿಣಾಮದಿಂದ ಪಾರಾಗಬಹುದು.
ಟಾಟಾ ಸಂಸ್ಥೆ ಈ ಯಂತ್ರದ ವೆಚ್ಚವನ್ನು ಭರಿಸಿದೆ. ಆಯುಷ್ಮಾನ್ ಕಾರ್ಡ್‌ವುಳ್ಳವರಿಗೆ ಉಚಿತ ಚಿಕಿತ್ಸೆ ಲಭಿಸಲಿದ್ದು, ಉಳಿದವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಲಭಿಸಲಿದೆ. ಮಂಗಳೂರಿನಲ್ಲಿ ಅತ್ಯಾಧುನಿಕ ಆಸ್ಪತ್ರೆಗಳಿದ್ದರೂ ಪೂರ್ಣ ಪ್ರಮಾಣದ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾನ್ಸರ್ ಆಸ್ಪತ್ರೆಯ ಕೊರತೆಯಿತ್ತು. ಟಾಟಾ ಟ್ರಸ್ಟ್ ಸಹಯೋಗದಲ್ಲಿ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಲಿದ್ದು, ಕರಾವಳಿ ಹಾಗು ಕೇರಳದ ರೋಗಿಗಳಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿ, ಪ್ರಧಾನಿ; ಐಎಸ್ಡಿ, ಐಬಿ ಕಟ್ಟೆಚ್ಚರ