ಮಂಗಳೂರು: ಮಂಗಳೂರು - ಬೆಂಗಳೂರು ಮಾರ್ಗವಾಗಿ ರಾತ್ರಿ ಸಂಚಾರದ ರೈಲುಗಳಲ್ಲಿ ಮೊಬೈಲ್ ಫೋನ್ ಹಾಗೂ ಲೇಡಿಸ್ ಬ್ಯಾಗ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಗಾಂಧಿನಗರದ ಅಬ್ದುಲ್ ಅಝೀಜ್(19) ಬಂಧಿತ ಆರೋಪಿ. ಕಳೆದ ಎರಡು ತಿಂಗಳುಗಳಿಂದ ಮಂಗಳೂರು-ಬೆಂಗಳೂರು ಮಧ್ಯೆ ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಕಳವು ನಡೆಯುತ್ತಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ದೂರುಗಳು ಬರುತಿತ್ತು. ಈ ಹಿನ್ನೆಲೆ ಡಿ.25ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆರೋಪಿ ಅಬ್ದುಲ್ ಅಜೀಝ್‌ನನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಕೂಲಿ ಕೆಲಸಗಾರನಾಗಿದ್ದು, ಕಳೆದ 2 ತಿಂಗಳುಗಳಿಂದ ಮಂಗಳೂರು-ಬೆಂಗಳೂರು ನಡುವೆ ರಾತ್ರಿ ಸಂಚಾರದ ರೈಲುಗಳಲ್ಲಿ ಪ್ರಯಾಣಿಕರು ಮಲಗಿದ್ದ ವೇಳೆ ಕಳ್ಳತನ ನಡೆಸುತ್ತಿದ್ದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ 1 ಟ್ಯಾಬ್, 11 ಮೊಬೈಲ್ ಪೋನ್‌ಗಳು, ಒಂದು ವ್ಯಾನಿಟಿ ಬ್ಯಾಗ್, ಪಾಸ್‌ಪೋರ್ಟ್ ಹಾಗೂ ಇತರ ಕೆಲವು ದಾಖಲಾತಿಗಳು ಸೇರಿದಂತೆ 1.75 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.