ಮಂಗಳೂರು (ದಕ್ಷಿನ ಕನ್ನಡ) : ನವ ಮಂಗಳೂರು ಬಂದರಿಗೆ ಈ ಋತುವಿನ ನಾಲ್ಕನೆ ಪ್ರವಾಸಿ ಹಡಗು ಎಂ.ಎಸ್ ರಿವೇರಿಯಾ ಇಂದು ಆಗಮಿಸಿತು. ಹೊಸ ವರ್ಷದ 2024 ರ ಮೊದಲ ವಿಹಾರ ನೌಕೆಯಾಗಿ ಮತ್ತು ಕ್ರೂಸ್ ಸೀಸನ್‌ನ ನಾಲ್ಕನೆಯದಾಗಿ ಆಗಮಿಸಿದ ಪ್ರವಾಸಿ ಹಡಗು ಇದಾಗಿದೆ.
ಮಾರ್ಷಲ್ ಐಲ್ಯಾಂಡ್ಸ್ ಫ್ಲ್ಯಾಗ್ಡ್ ಹಡಗು ಬರ್ತ್ ನಂ. 04 ರಲ್ಲಿ ಲಂಗರು ಹಾಕಿತ್ತು. ಈ ಹಡಗಿನಲ್ಲಿ 980 ಪ್ರಯಾಣಿಕರು ಮತ್ತು 752 ಸಿಬ್ಬಂದಿ ಆಗಮಿಸಿದ್ದರು. ಈ ನೌಕೆಯು ದುಬೈ, ಮುಂಬೈ ಮತ್ತು ಮೊರ್ಮುಗೋವಾ ಬಂದರುಗಳಿಂದ ಇಂದು ಮಂಗಳೂರಿಗೆ ಆಗಮಿಸಿತು. ಹಡಗಿನ ಒಟ್ಟಾರೆ ಉದ್ದವು 239 ಮೀಟರ್‌ಗಳಾಗಿದ್ದು, 66,172 ಒಟ್ಟು ಟನ್‌ಗಳ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಮಂಗಳೂರಿನ ಯಕ್ಷಗಾನ ಕಲಾವಿದರಿಂದ ಕ್ರೂಸ್ ಪ್ರಯಾಣಿಕರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಪ್ರವಾಸಿಗರು ಕ್ರೂಸ್ ಲಾಂಜ್‌ನಲ್ಲಿ ವಿವಿಧ ಸಾಂಸ್ಕೃತಿಕ ಆಕರ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸಿದರು. ಪ್ರವಾಸಿಗರಿಗೆ ವೈದ್ಯಕೀಯ ತಪಾಸಣೆ, ಬಹು ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಮಂಗಳೂರು ನಗರದ ಸುತ್ತಮುತ್ತ ಸಾರಿಗೆ ಬಸ್‌ಗಳು ಮತ್ತು ವಿಶೇಷ ಟ್ಯಾಕ್ಸಿಗಳು, ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ, ವರ್ಚುಯಲ್ ರಿಯಾಲಿಟಿ ಅನುಭವ ವಲಯ, ಉಚಿತ ವೈಫೈ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಲಾಗಿತ್ತು.
ನಂತರ ಸ್ಥಳೀಯ ತಂಡ ಯಕ್ಷಗಾನ ಪ್ರದರ್ಶನ ನೀಡಿ ಪ್ರವಾಸಿಗರನ್ನು ರಂಜಿಸಿತು. ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡಬಿದ್ರಿಯ 1000 ಕಂಬಗಳ ದೇವಸ್ಥಾನ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು.
ತಮ್ಮ ಮುಂದಿನ ಪ್ರಯಾಣವನ್ನು ಆರಂಭಿಸಿದ ಪ್ರವಾಸಿಗರು ಮಂಗಳೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಮರಣಿಕೆಗಳನ್ನು ಪಡೆದರು. ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಸಂಜೆ 5 ಗಂಟೆಗೆ ಪ್ರಯಾಣ ಬೆಳೆಸಿತು.
ಎರಡನೇ ಪ್ರವಾಸಿ ಹಡಗು : ಕಳೆದ ವರ್ಷ ಡಿಸೆಂಬರ್ 14 ರಂದು ಎರಡನೇ ಪ್ರವಾಸಿ ಹಡಗು ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ "MS BOLETTE" ಬೆಳಗ್ಗೆ 8 ಗಂಟೆಗೆ ಮಂಗಳೂರು ಬಂದರಿಗೆ ಆಗಮಿಸಿತ್ತು. ಹಡಗಿನಲ್ಲಿ 704 ಪ್ರಯಾಣಿಕರು ಮತ್ತು 645 ಸಿಬ್ಬಂದಿ ಇದ್ದರು. ಹಡಗಿನ ಒಟ್ಟಾರೆ ಉದ್ದವು 238 ಮೀಟರ್ ಮತ್ತು 62,735 ಒಟ್ಟು ಟನ್ನೇಜ್ ಮತ್ತು 8.1 ಮೀಟರ್ ಕರಡು ಸಾಗಿಸುವ ಸಾಮರ್ಥ್ಯ ಹೊಂದಿತ್ತು. ಹಡಗಿನಿಂದ ಇಳಿಯುವಾಗ ಪ್ರಯಾಣಿಕರಿಗೆ "ಚೆಂಡೆ" ಮತ್ತು "ಹುಲಿವೇಷ ಕುಣಿತ” ಗಳ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಗಿತ್ತು.
ಇದನ್ನೂ ಓದಿ : ನವ ಮಂಗಳೂರು ಬಂದರಿಗೆ ಎರಡನೇ ವಿದೇಶಿ ಪ್ರವಾಸಿ ಹಡಗು: 704 ಪ್ರವಾಸಿಗರ ಆಗಮನ