ಮಂಗಳೂರು: ನಗರದಲ್ಲಿ ಮುಂಜಾನೆಯಿಂದಲೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆಯಿಂದ ನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಜನರು ಪರದಾಟ ನಡೆಸಿದ್ರೆ, ರಸ್ತೆಯಲ್ಲೆಲ್ಲಾ ನೀರು ಹರಿಯುತ್ತಿರುವ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೆಂಟ್ರಲ್ ರೈಲು ನಿಲ್ದಾಣಕ್ಕೆ ಮಳೆ ನೀರು ನುಗ್ಗಿದ್ದು ಇಲ್ಲಿನ ಪರಿಸ್ಥಿತಿ ಕೆರೆಯಂತಾಗಿದೆ. ಇದ್ರಿಂದಾಗಿ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರದ ಪಾಂಡೇಶ್ವರ ಸುಭಾಷ್ ನಗರ ಸಂಪೂರ್ಣ ಜಲಾವೃತವಾಗಿದೆ.
ಇತರ ಪ್ರಮುಖ ಪ್ರದೇಶಗಳಾದ ಫಳ್ನೀರ್ ರಸ್ತೆ, ಪಡೀಲ್ ರೈಲ್ವೇ ಅಂಡರ್ ಪಾಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ನೀರು ತುಂಬಿದ್ದು, ಕೊಟ್ಟಾರ ಚೌಕಿಯ ರಾಜಕಾಲುವೆ ಭರ್ತಿಯಾಗಿ ಹರಿಯುತ್ತಿದೆ.
ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದ್ದು, ವಾಹನ ಸವಾರರು ಪೇಚಿಗೆ ಸಿಲುಕಿದ್ದಾರೆ.