ಮಂಗಳೂರು: ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವ ಮೂಲಕ ಮಂಗಳೂರಿನ ಇಬ್ಬರು ಐಪಿಎಸ್ ಅಧಿಕಾರಿಗಳು, ಅಕ್ರಮ ಮರಳು ದಂಧೆಕೋರರಿಗೆ ಶಾಕ್ ನೀಡಿದ್ದಾರೆ.
ಓದಿ: ಪಡಿಕಲ್, ಸಮರ್ಥ್ ಶತಕದಾಟ: ರೈಲ್ವೇಸ್ ವಿರುದ್ದ ಕರ್ನಾಟಕಕ್ಕೆ 10 ವಿಕೆಟ್ಗಳ ಭರ್ಜರಿ ಜಯ
ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಡಿಸಿಪಿಯವರು ಸ್ವತಃ ಸ್ಕೂಟರ್ ನಲ್ಲಿ ಬಂದು ದಾಳಿ ನಡೆಸಿ, ಮಂಗಳೂರಿನಿಂದ ಕೇರಳದೆಡೆಗೆ ಎಗ್ಗಿಲ್ಲದೆ ಸಾಗಾಟ ಮಾಡುತ್ತಿರುವ ಅಕ್ರಮ ಮರಳು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಅವರು ತಡರಾತ್ರಿ ಮೂರು ಗಂಟೆಯ ಹೊತ್ತಿಗೆ ಸಾಮಾನ್ಯರಂತೆ ಬರ್ಮುಡಾ, ನೈಟ್ ಡ್ರೆಸ್ ಗಳನ್ನು ಧರಿಸಿ ಮಫ್ತಿಯಲ್ಲಿ ತಲಪಾಡಿ ಗಡಿಗೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಅಕ್ರಮ ಮರಳು ಸಾಗಾಟದ ಲಾರಿ ಟೋಲ್ ಗೇಟ್ ಮೂಲಕ ಹಾದು ಬಂದಿದೆ. ತಕ್ಷಣ ಇಬ್ಬರೂ ಅಧಿಕಾರಿಗಳು ದಾಳಿ ನಡೆಸಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಎಲ್ಲಾ ದೃಶ್ಯಗಳು ಟೋಲ್ ಗೇಟ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ ಮಾಹಿತಿ ನೀಡಿ, ಅಕ್ರಮ ಮರಳು ದಂಧೆಕೋರರು ಕೇರಳಕ್ಕೆ ಸಾಗಾಟ ಮಾಡುವುದಕ್ಕಾಗಿ, ತಲಪಾಡಿ ಚೆಕ್ಪೋಸ್ಟ್ಗಳಲ್ಲಿನ ಪಕ್ಕದ ಖಾಲಿ ಮೈದಾನಗಳಲ್ಲಿ ಮರಳನ್ನು ರಾಶಿ ಹಾಕುತ್ತಾರೆ. ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ಇಲ್ಲದ ಸಂದರ್ಭಗಳಲ್ಲಿ ಮರಳನ್ನು ತಕ್ಷಣ ಗಡಿ ಭಾಗದಿಂದ ಕೇರಳಕ್ಕೆ ಸಾಗಾಟ ಮಾಡುತ್ತಾರೆ. ಇದು ಬಹಳ ಯೋಜನಾಬದ್ಧ ಪ್ರಕ್ರಿಯೆಯಾಗಿದ್ದು, ಟೋಲ್ಗೇಟ್ ಸಿಬ್ಬಂದಿಯೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ.
ಕಾರ್ಯಾಚರಣೆ ನಡೆದಾಗ ಎರಡು ಕಾರುಗಳು ಲಾರಿಗಳಿಗೆ ಎಸ್ಕಾರ್ಟ್ ಮಾಡುತ್ತಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು ಕಾರನ್ನು ಬೆನ್ನಟ್ಟುವಂತೆ ತಿಳಿಸಿದ್ದಾರೆ. ಈ ಸಂದರ್ಭ ಪೊಲೀಸರನ್ನು ಹಿಂದೆ ಹಾಕಿ ಕಾರಿನಲ್ಲಿದ್ದವರು ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಏಳು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮರಳು ಲಾರಿ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.