ಮಂಗಳೂರು: ಕರಾವಳಿಯಲ್ಲಿ ದಸರಾ ಅಂದರೆ ನೆನಪಿಗೆ ಬರೋದೇ ಹುಲಿ ವೇಷದ ಮೆರುಗು. ಬ್ಯಾಂಡ್, ತಾಸೆಗಳ ಲಯಬದ್ಧವಾದ ವಾದನಕ್ಕೆ ಬಣ್ಣ ಬಣ್ಣದ ಹುಲಿಗಳ ನರ್ತನ. ಬ್ಯಾಂಡ್, ತಾಸೆಗಳ ಟರ್ರ್ ಟರ್ರ್ ಟರ್ರರ್ರ.... ಟರ್ರರ್ರ... ಎಂಬ ಧ್ವನಿ ಯಾರ ಕಿವಿಗೆ ಬಿದ್ದರೂ ಒಂದು ಸಲ ಕಣ್ಣು ನಿಮಿರಿಸಿ ಹುಲಿ ವೇಷದತ್ತ ನೋಡಿಯೇ ನೋಡುತ್ತಾರೆ. ಅಂತಹ ಆಕರ್ಷಣೆ ಹುಲಿ ವೇಷದಲ್ಲಿದೆ.
ಕರಾವಳಿಯಲ್ಲಿ ಆಧುನಿಕತೆಯ ಎಂತಹ ಗಾಳಿ ಬೀಸಿದರೂ ಇಂದಿಗೂ ಈ ಹುಲಿ ವೇಷದ ಕುಣಿತ ತನ್ನ ಪ್ರಸಿದ್ಧಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಪಟ್ಟೆ ಹುಲಿ, ಚಿಟ್ಟೆ ಹುಲಿ, ತಾಯಿ ಹುಲಿ, ಶಾರ್ದೂಲ ಹೀಗೆ ವಿವಿಧ ಹುಲಿಗಳ ಬಣ್ಣಗಳನ್ನು ಮೈಮೇಲೆ ಬಳಿದುಕೊಂಡ ಹುಲಿ ವೇಷ ನರ್ತಕರು, ಕುಣಿಯುತ್ತಾ ವಿವಿಧ ಕಡೆಗಳಲ್ಲಿ ಸುತ್ತುತ್ತಾ ಜನರನ್ನು ರಂಜಿಸಿ ತಮ್ಮ ಸಂಭಾವನೆ ಪಡೆಯುತ್ತಾರೆ.
ಕೇವಲ ಆರಾಧನಾ ದೃಷ್ಟಿಯಿಂದ ಹಾಗೂ ಹರಕೆ ಕಟ್ಟಿಕೊಂಡು ಹುಲಿ ವೇಷ ಧರಿಸಿ ಜನರನ್ನು ರಂಜಿಸಿ ಅವರು ನೀಡಿದ ಸಂಭಾವನೆ ಪಡೆಯುತ್ತಿದ್ದ ಈ ಕಲೆ ಎಷ್ಟು ಪ್ರಸಿದ್ಧಿ ಹೊಂದಿದೆ ಎಂದರೆ ಚಲನಚಿತ್ರಗಳಲ್ಲೂ ಈ ಹುಲಿ ವೇಷ ತನ್ನದೇ ಆದ ಛಾಪು ಮುಡಿಸಿದೆ. ಅದಲ್ಲದೆ ಪ್ರದರ್ಶನದ ಕಲೆಯಾಗಿ ಬಹುದೊಡ್ಡ ಮಟ್ಟದಲ್ಲಿ ಕರಾವಳಿಯಲ್ಲಿ ಆಯೋಜನೆಗೊಳ್ಳುತ್ತಿದೆ.
ಒಟ್ಟಿನಲ್ಲಿ ಕೇವಲ ಜನರಂಜನೆ, ಆರಾಧನೆ, ಹರಕೆ ಎಂಬಂತಹ ನೆಲೆಯಲ್ಲಿ ಹುಟ್ಟಿಕೊಂಡ ಕಲೆಯೊಂದು ವಿಭಿನ್ನ ಆಯಾಮವನ್ನು ಪಡೆದು ನಿರೀಕ್ಷೆಗೂ ಮೀರಿ ಬೆಳೆದು ನಿಂತಿದೆ.