ಬಂಟ್ವಾಳ(ದಕ್ಷಿಣ ಕನ್ನಡ): ತಾಲೂಕಿನ ಮೂವರು ಮಹಿಳೆಯರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೊತೆ ಸಂವಾದ ನಡೆಸುವ ಅವಕಾಶ ಪಡೆದುಕೊಂಡಿದ್ದು, ಅದಕ್ಕಾಗಿ ದೆಹಲಿಯತ್ತ ಹೊರಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿರುವ ಈ ಮೂವರು ಮಹಿಳೆಯರು ಬಂಟ್ವಾಳ ತಾಲೂಕಿನವರು. ಅಳಿಕೆ ಅನುಗ್ರಹ ಒಕ್ಕೂಟದ ವಾರಿಜ ಮತ್ತು ಅಮಿತ ಹಾಗೂ ಕೊಳ್ನಾಡು ನೇತ್ರಾವತಿ ಸಂಜೀವಿನಿ ಒಕ್ಕೂಟದ ಇಂದ್ರಾವತಿ ಎಂಬವರು ರಾಷ್ಟ್ರಪತಿಗಳ ಭೇಟಿಯ ಅವಕಾಶ ಪಡೆದವರು.
ಬುಡಕಟ್ಟು ಜನಾಂಗದ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಭೇಟಿಯಾಗುವ ಸಲುವಾಗಿ ದೆಹಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದ್ದು, ರಾಜ್ಯದಿಂದ 30 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಮೂವರೂ ಬಂಟ್ವಾಳ ತಾಲೂಕಿನವರು.
ಅನುಗ್ರಹ ಸಂಜೀವಿನಿ ಒಕ್ಕೂಟದಲ್ಲಿ ಕಳೆದ ಮೂರು ವರ್ಷಗಳಿಂದ ಎಂಬಿಕೆ ಆಗಿ ಕಾರ್ಯನಿರ್ವಹಿಸುತ್ತಿರುವ ವಾರಿಜಾ ಅವರು, ಈ ಒಕ್ಕೂಟದಿಂದ ಸ್ವ ಉದ್ಯೋಗಕ್ಕೆ ಪ್ರೇರಣೆ ಪಡೆದವರು. ಕೃಷಿ ಸಹಿತ ಮಲ್ಲಿಗೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಇವರು ಆಡು ಸಾಕಣೆ, ಕೋಳಿ ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಕನ್ಯಾನ ಕೆಪಿಎಸ್ ವಿದ್ಯಾಸಂಸ್ಥೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮಿತಾ ಅಣಬೆ ಕೃಷಿಯ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ತುಂಬು ಕುಟುಂಬದವರಾಗಿದ್ದು, ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲೂ ಮುಂದಿದ್ದಾರೆ.
ಇಂದ್ರಾವತಿ ಕೊಳ್ನಾಡು ನೇತ್ರಾವತಿ ಒಕ್ಕೂಟದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಹಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡುವ ಜೊತೆಗೆ ಟೈಲರಿಂಗ್ ವೃತ್ತಿಯನ್ನೂ ನೆಚ್ಚಿಕೊಂಡವರು. ಮಾ.31 ರಂದು ದೆಹಲಿಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಲಿರುವ ಇವರ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬೆಂಗಳೂರಿಗೆ ಹೋಗುವ ವೆಚ್ಚವನ್ನು ಸಂಜೀವಿನಿ ಜಿಲ್ಲಾ ಅಭಿಯಾನ ಘಟಕವೇ ಭರಿಸಲಿದ್ದು, ಬೆಂಗಳೂರಿನಿಂದ ದೆಹಲಿಗೆ ಹೋಗುವ ವಿಮಾನದ ವೆಚ್ಚವನ್ನು ರಾಜ್ಯ ಅಭಿಯಾನ ಘಟಕ ಭರಿಸಲಿದೆ. ರಾಜ್ಯದಿಂದ ಇಬ್ಬರು ಅಧಿಕಾರಿಗಳು, 30 ಮಹಿಳೆಯರು ಸೇರಿದಂತೆ ಒಟ್ಟು 32 ಮಂದಿ ದೆಹಲಿಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಲು ಬುಡಕಟ್ಟು ನಾಯಕರಿಗೆ ಅವಕಾಶ ನಿರಾಕರಣೆ: ಗೃಹ ಬಂಧನ