ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿನಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಸಹಿತ ಇಬ್ಬರು ಪುರುಷರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಮನೆಗೆ ತೆರಳಿರುವ ಇವರು, 14 ದಿನಗಳ ಹೋಂ ಕ್ವಾರಂಟೈನ್ನಲ್ಲಿ ಇರಲಿದ್ದಾರೆ. ಇನ್ನು ಕೋವಿಡ್ -19 ಸೋಂಕು ಶಂಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇಂದು 217 ಮಂದಿಯ ಗಂಟಲು ದ್ರವದ ಮಾದರಿಯಲ್ಲಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಹಿಂದೆ ಪರೀಕ್ಷೆಗೆಂದು ಕಳುಹಿಸಿರುವ 134 ಮಂದಿಯ ಗಂಟಲು ದ್ರವದ ವರದಿ ಬಂದಿದೆ. ಅದರಲ್ಲಿ 3 ಜನರಲ್ಲಿ ಸೋಂಕು ದೃಢಗೊಂಡಿದ್ದು, 131 ಮಂದಿಯಲ್ಲಿ ನೆಗೆಟಿವ್ ವರದಿ ಬಂದಿದೆ. ಇನ್ನುಳಿದ 21 ಮಂದಿಯ ವರದಿ ಬರಬೇಕಾಗಿದ್ದು, ಒಟ್ಟು 14 ಮಂದಿ ಅಬ್ಸರ್ವೇಶನ್ ನಲ್ಲಿದ್ದಾರೆ.
ಮಂಗಳೂರಿನ ಇಎಸ್ಐ ಹಾಸ್ಪಿಟಲ್, ಸುರತ್ಕಲ್ನ ಎನ್ಐಟಿಕೆ ಹಾಗೂ ವೆನ್ಲಾಕ್ ಆಸ್ಪತ್ರೆಯ ಕ್ವಾರಂಟೈನ್ನಲ್ಲಿ ಯಾರೂ ಇಲ್ಲ. ಇಂದು 27 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಮಂಗಳೂರಲ್ಲಿ ಈವರೆಗೆ 42,914 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ 9,756 ಮಂದಿಯ ಗಂಟಲು ದ್ರವ ಪಡೆಯಲಾಗಿದ್ದು, ಈವರೆಗೆ 9,652 ಮಂದಿಯ ವರದಿ ಬಂದಿದೆ. ಅದರಲ್ಲಿ 9,457 ಮಂದಿಯ ವರದಿಯಲ್ಲಿ ನೆಗೆಟಿವ್ ಬಂದಿದೆ. 195 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, 99 ಮಂದಿ ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 89 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.